

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದ್ದು, ಗೆಜೆಟ್ ನೋಟಿಫಿಕೇಷನ್ ಸಹ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಚುನಾವಣೆ ಆಯೋಗ ಸೂಚನೆ ಕೊಟ್ಟ ಕೂಡಲೇ ಚುನಾವಣೆಗೆ ನಾವು ಸಿದ್ಧ ಎಂದರು. ಯಡಿಯೂರಪ್ಪ ಅವರನ್ನು ಪದಚ್ಯುತಿ ಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಸಿಎಂ ಕುರ್ಚಿ ಮೇಲೆ ವ್ಯಾಮೋಹ ಹೋಗಿಲ್ಲ. ಬಿಜೆಪಿ-ಕೆಜೆಪಿಯಿಂದ ಸಿದ್ದರಾಮಯ್ಯ ಆಕಸ್ಮಿಕವಾಗಿ ಸಿಎಂ ಆಗುವಂತಾಯಿತು. ಇದೊಂದು ಬಾಲಿಶ ಹೇಳಿಕೆ, ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.
ಕಾಂಗ್ರೆಸ್ಗೆ ಹೋಗಿ ಆ ಪಕ್ಷವನ್ನು ಮುಳುಗಿಸಿದರು. ಅವರು ಸಿಎಂ ಆಗಿದ್ದ ಅವಧಿಯಲ್ಲೇ ಗುಂಪುಗಾರಿಕೆ ಹೆಚ್ಚಾಗಿದ್ದು ಎಂದ ಅವರು, ನಿಮ್ಮಿಂದ ಧರ್ಮಗಳ ಮಧ್ಯೆ ಗಲಭೆಗಳು ಆಗುತ್ತಿರುವುದು. ಹಿಂದು-ಮುಸ್ಲಿಮರನ್ನು ನೆಮ್ಮದಿಯಾಗಿ ಬದುಕಲು ಬಿಡಿ ಎಂದರು.
ಕಾಂಗ್ರೆಸ್ಗೆ ನಾಚಿಕೆ ಆಗಬೇಕು: ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿಕೆ ನೋಡಿಯಾದರೂ ಕಾಂಗ್ರೆಸ್ಗೆ ನಾಚಿಕೆ ಆಗಬೇಕು. ನಮ್ಮ ನಾಯಕರು ಯಾರೂ ನನ್ನ ಬೆಂಬಲಕ್ಕೆ ಬಂದಿಲ್ಲ ಅಂತ ಹೇಳಿದ್ದಾರೆ. ಸಿಬಿಐ ತನಿಖೆ ಕೇಳಿದ್ದಾರೆ. ಇದು ಕೋಮುಗಲಭೆ ಅಲ್ಲ, ಮತಾಂಧರ ದೊಂಬಿ. ಆದರೂ ಈ ಘಟನೆಯನ್ನು ಕಾಂಗ್ರೆಸ್ ಖಂಡಿಸಿಲ್ಲ ಎಂದು ಈಶ್ವರಪ್ಪ ಟೀಕಿಸಿದರು.
-ಠಿ;1500 ಕೋಟಿ ಅನುದಾನ
ಆಗಸ್ಟ್ನಲ್ಲಿ ಉಂಟಾದ ಪ್ರವಾಹಕ್ಕೆ ಬಿಡುಗಡೆಯಾದ ಅನುದಾನ ಖರ್ಚಾಗಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 447 ಕೋಟಿ ಅಲ್ಲ, 1500 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಈಗಾಗಲೇ 800 ಕೋಟಿ ರೂ. ಮೊತ್ತದ ಕಾಮಗಾರಿ ಮುಗಿದಿದೆ ಎಂದರು. ಈಗ ಮತ್ತೆ ಮಳೆ ಆಗುತ್ತಿರುವುದರಿಂದ ಉಳಿದ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಲಾಗಿದೆ. ಈ ನೆರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಹಳೆಯ ಕಾಮಗಾರಿಗಳಿಗೆ ಮತ್ತೆ ಚಾಲನೆ ಕೊಡುತ್ತೇವೆ ಎಂದು ಸಚಿವರು ತಿಳಿಸಿದರು.