ಬೆಂಗಳೂರು: ‘ಹೊಂದಿಸಿ ಬರೆಯಿರಿ’ ಖ್ಯಾತಿಯ ಶ್ರೀರಾಮ್, ನಟಿಯರಾದ ರಮಿಕಾ ಶಿವು, ತಪಸ್ವಿ ಪೂಣಚ್ಚ ಕಲಾಬಳಗದಲ್ಲಿರುವ ಚಿತ್ರ ‘ಪ್ರೇಮದ ಊರಲಿ’. ಮನೋಜ್ ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದು, ಇತ್ತೀಚೆಗೆ ಚಿತ್ರದ ‘ಏರುಪೇರು ಹೃದಯ’ ಎಂಬ ಹೊಸ ಹಾಡನ್ನು ರಿಲೀಸ್ ಮಾಡಿದೆ. ಸುನಾದ್ ಗೌತಮ್ ಸಂಗೀತ ಸಂಯೋಜಿಸಿರುವ ಈ ಸಾಂಗ್‌ಗೆ ಮನೋಜ್ ಕುಮಾರ್, ನವೀನ್ ವಿಶಾರದ ಸಾಹಿತ್ಯ ಒದಗಿಸಿದ್ದಾರೆ. ಗಾಯಕಿ ನಿನಾದ ನಾಯಕ್ ಇಂಪಾಗಿ ಹಾಡಿದ್ದಾರೆ. ಈ ಹಾಡಿನಲ್ಲಿ ಶ್ರೀರಾಮ್ ಮತ್ತು ರಮಿಕಾ ಕಾಣಿಸಿಕೊಂಡಿದ್ದಾರೆ. ನಟಿ ರಮಿಕಾ, ‘ಇಡೀ ಕುಟುಂಬ ಒಟ್ಟಿಗೆ ನೋಡಬಹುದಾದ ಕಥೆ, ಕಣ್ಣಿಗೆ ಹಬ್ಬವೆನಿಸುವ ರಮಣೀಯ ದೃಶ್ಯಗಳಿರುವ ಮ್ಯೂಸಿಕಲ್ ಸಿನಿಮಾ ಇದಾಗಿದೆ. ಈ ಕಾರಣಕ್ಕೇ ‘ಪ್ರೇಮದ ಊರಲಿ’ ಚಿತ್ರ ಜನರನ್ನು ಥಿಯೇಟರ್‌ಗೆ ಸೆಳೆಯಲಿದೆ. ‘ಮುಂಗಾರು ಮಳೆ’ ಬಂದಿದ್ದ ಕಾಲದಲ್ಲಿ ತೆರೆಕಂಡಿದ್ದ ಚಿತ್ರಗಳನ್ನು ‘ಪ್ರೇಮದ ಊರಲಿ’ ನೆನಪಿಸುತ್ತದೆ. ನಾವು ಏನೇ ಹೇಳಿದರೂ ಕಟೆಂಟ್ ಜನರಿಗೆ ತಲುಪಿದರಷ್ಟೇ ಸಿನಿಮಾ ಗೆಲ್ಲುತ್ತದೆ. ಮೊದಲ ಹಾಡು ‘ಏರುಪೇರು ಹೃದಯ’ ಜನರಿಗೆ ಇಷ್ಟವಾಗಿದ್ದು, ಈ ಚಿತ್ರದ ಬಗ್ಗೆ ಸಣ್ಣನಿರೀಕ್ಷೆ ಮೂಡಿದೆ. ಹಾಡುಗಳ ಮೂಲಕವೇ ಈ ಸಿನಿಮಾ ಜನರನ್ನು ಥಿಯೇಟರ್‌ಗೆ ಕರೆತರುತ್ತದೆ ಎಂಬ ನಂಬಿಕೆಯಿದೆ’ ಎಂದು ಹೇಳಿಕೊಳ್ಳುತ್ತಾರೆ.