ಗರ್ಭ ಪರೀಕ್ಷೆಗೆ ಹೋದವರು ಸೇರಿದರು ಕ್ವಾರಂಟೈನ್‌! 62 ಗರ್ಭಿಣಿಯರಿಗೆ ಈ ದುಃಸ್ಥಿತಿ ಬಂದದ್ದೇಕೆ?

pregnant
Published on

ಪುಣೆ: ಕರೊನಾ ಮಹಾಮಾರಿ ಯಾರ ದೇಹವನ್ನು ಯಾವ ರೀತಿಯಲ್ಲಿ ಒಕ್ಕರಿಸುತ್ತಿದೆ ಎಂದು ತಿಳಿಯುವುದೇ ಇಲ್ಲ. ಸೋಂಕು ಯಾರ ದೇಹವನ್ನು ಹೊಕ್ಕಿರುತ್ತದೆ ಎಂಬುದರ ಅರಿವೇ ಇಲ್ಲದೇ ಅವರ ಸಂಪರ್ಕಕ್ಕೆ ತಿಳಿದೋ, ತಿಳಿಯದೆಯೋ ಬರುವ ವ್ಯಕ್ತಿಗಳು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಲೇಬೇಕು.

ಇಂಥದ್ದೇ ಒಂದು ನೋವಿನ ಘಟನೆ ನಡೆದಿರುವುದು ಪುಣೆಯ ಶಿಕ್ರಪುರ ಆಸ್ಪತ್ರೆಯಲ್ಲಿ. ಗರ್ಭ ಪರೀಕ್ಷೆ ಮಾಡುವ ವೈದ್ಯನಿಗೊಬ್ಬನಿಗೆ (ಸೋನೋಗ್ರಾಫರ್‌) ಸೋಂಕು ತಗುಲಿದ್ದು ತಿಳಿಯುವ ವೇಳೆಗೆ ಅವರು ಅದಾಗಲೇ ಒಂದಲ್ಲ… ಎರಡಲ್ಲ ಬರೋಬ್ಬರಿ 62 ಗರ್ಭಿಣಿಯರಿಗೆ ಪರೀಕ್ಷೆ ಮಾಡಿಯಾಗಿತ್ತು.

ನಿನ್ನೆ ವೈದ್ಯರಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದ್ದರಿಂದ ಏಪ್ರಿಲ್ 6 ರಿಂದ 8ನೇ ತಾರೀಖಿನ ನಡುವೆ ಇವರ ಭ್ರೂಣ ಪರೀಕ್ಷಕ ಕೇಂದ್ರಕ್ಕೆ ಭೇಟಿ ನೀಡಿರುವ ಎಲ್ಲಾ ಗರ್ಭಿಣಿಯರನ್ನು ಕ್ವಾರೆಂಟೈನ್ ಇರುವಂತೆ ಸೂಚಿಸಲಾಗಿದೆ. ವೈದ್ಯನಿಗೆ ಸೋಂಕು ಇರುವುದು ದೃಢಪಡುತ್ತಿದ್ದಂತೆಯೇ 6 ರಿಂದ 8 ನೇ ತಾರೀಖಿನ ನಡುವೆ ಯಾರೆಲ್ಲಾ ಗರ್ಭಿಣಿಯರು ಆಸ್ಪತ್ರೆಗೆ ಭೇಟಿ ನೀಡಿದ್ದು ಎಂಬ ಮಾಹಿತಿಯನ್ನು ಕಲೆ ಹಾಕಲಾಯಿತು. ನಂತರ ಅವರಿಗೆಲ್ಲಾ ವಿಷಯ ತಿಳಿಸಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಎಂದು ಇಲ್ಲಿನ ಜಿಲ್ಲಾ ಪಂಚಾಯತ್ ಸಿಇಒ ಮಾಹಿತಿ ನೀಡಿದ್ದಾರೆ.

ಸದ್ಯ ಎಲ್ಲರನ್ನೂ ಹೋಮ್‌ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಲಾಗಿತ್ತು, ಅಗತ್ಯ ಕಂಡುಬಂದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ ಇಂದಿನವರೆಗೆ ಯಾವೊಬ್ಬ ಗರ್ಭಿಣಿಯಲ್ಲಿಯೂ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ. ಆದರೆ ಲಕ್ಷಣಗಳು ಕಾಣಿಸಿಕೊಳ್ಳಲು ಇನ್ನೂ ಕೆಲವು ದಿನಗಳು ಕಾಯಬೇಕಿರುವ ಕಾರಣ, ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.


ಪುಣೆಯಲ್ಲಿ ಇದುವರೆಗೆ 362 ಮಂದಿಗೆ ಕರೊನಾ ಸೊಂಕು ಪತ್ತೆಯಾಗಿದ್ದು, ಇದಾಗಲೇ 50 ಮಂದಿ ಮೃತಪಟ್ಟಿದ್ದಾರೆ, ಇನ್ನು ಪುಣೆಯ ಗ್ರಾಮೀಣ ಭಾಗಗಳಲ್ಲಿ 10 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net