

ಲಖನೌ: ಕುಡಿಯುವ ಚಟದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಪಾಪಿ ಪತಿರಾಯನೊಬ್ಬ ಗರ್ಭಿಣಿ ಪತ್ನಿಯನ್ನು ಬೈಕ್ ಕಟ್ಟಿ ಸುಮಾರು 200 ಮೀಟರ್ ಎಳೆದೊಯ್ದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಘುಂಗ್ಚಾಯ್ ಗ್ರಾಮದಲ್ಲಿ ಶನಿವಾರ ನಡೆದಿದೆ.
ಆರೋಪಿ ಪತಿ ರಾಮ್ಗೋಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಆತನ ಪತ್ನಿ ಸುಮನ್ ಎಂಬಾಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವರದಿಗಳ ಪ್ರಕಾರ ರಾಮ್ಗೋಪಾಲ್ ಶನಿವಾರ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಪತ್ನಿ ಸುಮನ್ ಗಂಡನ ವಿರುದ್ಧ ಪ್ರತಿಭಟಿಸಿದ್ದಳು. ಇದರಿಂದ ಕುಪಿತಗೊಂಡ ರಾಮ್ಗೋಪಾಲ್, ಗರ್ಭಿಣಿ ಅಂತಾನೂ ನೋಡದೆ ಆಕೆಯ ಮೇಲೆ ಥಳಿಸಿದ್ದಾನೆ. ಇದಾದ ಬಳಿಕ ಆಕೆಯನ್ನು ಬೈಕ್ಗೆ ಕಟ್ಟಿ 200 ಮೀಟರ್ ಎಳೆದೊಯ್ದಿದ್ದಾನೆ. ದಾರಿಹೋಕರು ಆತನನ್ನು ತಡೆಯಲು ಯತ್ನಿಸಿದರೂ, ಗೋಪಾಲ್ ಅವರ ಮಾತನ್ನು ಕೇಳಲಿಲ್ಲ. ಕೊನೆಗೆ ಸುಮನ್ ಸಹೋದರ ಆಕೆಯನ್ನು ಕಾಪಾಡುವಲ್ಲಿ ಯಶಸ್ಸಿಯಾಗಿದ್ದಾರೆ ಮತ್ತು ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿದನು.
ರಾಮ್ಗೋಪಾಲ್ ಮತ್ತು ಸುಮನ್ 6 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅಚ್ಚರಿ ಏನೆಂದರೆ ಇಬ್ಬರದ್ದು ಪ್ರೇಮ ವಿವಾಹ. ಮದುವೆಯಾದ ಕೆಲವು ದಿನಗಳ ಬಳಿಕ ಗಂಡ ಡ್ರಗ್ಸ್ ಚಟಕ್ಕೆ ದಾಸನಾದ ಎಂದು ಸುಮನ್ ತಿಳಿಸಿದ್ದಾಳೆ. ಈಗ ಎಂಟು ತಿಂಗಳ ಗರ್ಭಿಣಿಯಾಗಿರುವ ಸುಮನ್, ಗಂಡನ ಕುಡಿತದ ಚಟಕ್ಕೆ ಆಗಾಗ ಜಗಳವಾಡುತ್ತಿದ್ದರು. ಘಟನೆಯ ವೇಳೆ ರಾಮ್ ಗೋಪಾಲ್ ಅವರ ಸಹೋದರ ಮತ್ತು ತಾಯಿ ಮನೆಯಲ್ಲಿದ್ದರು. ಅವರು ಕೂಡ ಪ್ರತಿಭಟಿಸಿ ಸುಮನ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರು.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಮ್ಗೋಪಾಲ್ನನ್ನು ವಶಕ್ಕೆ ಪಡೆದಿದ್ದಾರೆ. ಸಹೋದರ ವೈಶ್ಪಾಲ್ ದೂರಿನ ಮೇರೆಗೆ ಸುಮನ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಎಳೆದಾಡಿ ಥಳಿಸಿರುವ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಘುಂಗ್ಚಾಯ್ ಠಾಣಾಧಿಕಾರಿ ರಾಜೇಂದ್ರ ಸಿಂಗ್ ಸಿರೋಹಿ ತಿಳಿಸಿದ್ದಾರೆ. (ಏಜೆನ್ಸೀಸ್)