ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಚಲಿಸುತ್ತಿದ್ದ ರೈಲಿನಿಂದ ನೂಕಿದ ದುಷ್ಕರ್ಮಿಗಳು; ಓರ್ವ ಅರೆಸ್ಟ್​, ಮುಂದುವರೆದ ಶೋಧ ಕಾರ್ಯ

Harassment
Published on

ಚೆನ್ನೈ: ಗರ್ಭಿಣಿ ಮಹಿಳೆಯ ಮೇಲೆ ಇಬ್ಬರು ದುರುಳರು ಲೈಂಗಿಕ ದೌರ್ಜನ್ಯ ಎಸಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿರುವ ಘಟನೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಜೋಲಾರ್‌ಪೆಟ್ಟೈಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿಗಳಿಬ್ಬರು ಮಹಿಳೆ ಶೌಚಾಲಯಕ್ಕೆ ತೆರಳುತ್ತಿರುವುದನ್ನು ಗಮನಿಸಿ ಆಕೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡಿದ್ದು, ಆಕೆಯನ್ನು ವೆಲ್ಲೂರಿನ ಕೆವಿ ಕುಪ್ಪಂ ಬಳಿ ರೈಲಿನಿಂದ ಹೊರಗೆ ತಳ್ಳಿದ್ದಾರೆ. 

Harassment

ಸಂತ್ರಸ್ತೆ ಕೈ ಮತ್ತು ಕಾಲು ಮುರಿದಿದ್ದು, ಆಕೆಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಜೋಲಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನ ಹೇಮರಾಜ್ ಎಂದು ತಿಳಿದು ಬಂದಿದ್ದು, ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದ್ದು, ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. 

ಸಂತ್ರಸ್ತ ಮಹಿಳೆ ಕೊಯಂಬತ್ತೂರು ಬಳಿ ಇರುವ ಬಟ್ಟ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಆಂಧ್ರಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದರು. ಗಂಭೀರವಾಗಿ ಗಾಯಗೊಂಡಿರುವ ಗರ್ಭಿಣಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬ ಮಾಹಿತಿ ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net