ಆರೋಗ್ಯ ಭಾಗ್ಯ, ಅಭಿವೃದ್ಧಿ ಮಂತ್ರ: ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಗೆ ಆದ್ಯತೆ

Page 11
Published on

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜೀವನಶೈಲಿ ಸಂಬಂಧಿತ ಹೃದ್ರೋಗ, ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿರುವ ಕಾರಣ, ಸ್ಥಳೀಯವಾಗಿ ಸಕಾಲದಲ್ಲಿ ಮಿತವ್ಯಯಿ, ಹೈಟೆಕ್ ಚಿಕಿತ್ಸೆ ಒದಗಿಸುವ ಕಡೆಗೆ ಸರ್ಕಾರದ ಆದ್ಯತೆ ನೀಡಿದೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರವನ್ನು ಹಾಗೂ ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಪ್ರಾರಂಭಿಸುವುದಾಗಿ ಅದು ಘೋಷಿಸಿದೆ.

ಕಳೆದ ವರ್ಷದ ಒಟ್ಟಾರೆ ಬಜೆಟ್ ಮೊತ್ತದಲ್ಲಿ ಶೇ. 4 ಅನುದಾನ ಆರೋಗ್ಯ ಕ್ಷೇತ್ರಕ್ಕೆ ನೀಡಿತ್ತು. ಆರೋಗ್ಯ ಸೇವೆವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಬಾರಿ ಶೇ. 5 ಅನುದಾನ ಘೋಷಿಸಿದೆ. ಕಳೆದ ವರ್ಷಕ್ಕೆ ( 11,908 ಕೋಟಿ ರೂ.)ಹೋಲಿಸಿದರೆ ಈ ಬಾರಿ ಆರೋಗ್ಯ ಕ್ಷೇತ್ರಕ್ಕೆ 2,074 (13,982 ಕೋಟಿ ರೂ.) ಕೋಟಿ ರೂ. ಹೆಚ್ಚಿನ ಅನುದಾನ ನೀಡಿದೆ.

ಹೃದ್ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಒದಗಿಸಲು ರಾಜ್ಯದ 75 ತಾಲೂಕು ಆಸ್ಪತ್ರೆಗಳನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಮ್ಯಾಪಿಂಗ್ ಮಾಡಿ ಗ್ರಾಮೀಣ ಜನರಿಗೆ ತಾಲೂಕು ಮಟ್ಟದಲ್ಲಿಯೇ ಹೃದಯ ಸಂಬಂಧಿ ಚಿಕಿತ್ಸೆ ಒದಗಿಸುವುದಾಗಿ ತಿಳಿಸಿದೆ. ಅದೇ ರೀತಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಸೌಕರ್ಯ ಒದಗಿಸಲು ಆಯ್ದ 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಇನ್​ಫ್ಯೂಷನ್ ಸೆಂಟರ್ ಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ.

76 ಜೀವರಕ್ಷಕ ಆರೋಗ್ಯ ಸೇವೆಗಳು: ಅಪಘಾತಕ್ಕೊಳಗಾದ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾದ 48 ಗಂಟೆಗಳೊಳಗಾಗಿ 76 ಅವಶ್ಯ ಜೀವ ರಕ್ಷಕ ಆರೋಗ್ಯ ಸೇವೆ ಒದಗಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆ ಪ್ರಾರಂಭಿಸಲಾಗುವುದು.

ಮಿದುಳು ಆರೋಗ್ಯ ಕಾರ್ಯಕ್ರಮ: ಸಾಮಾನ್ಯ ಜನರ ಮಿದುಳಿನ ಆರೋಗ್ಯ ಕಾಪಾಡಲು ಹಾಗೂ ಜಾಗೃತಿ ಮೂಡಿಸಲು ನಿಮ್ಹಾನ್ಸ್ ಸಹಯೋಗದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮಿದುಳು ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದೆ. ಮರಣಾ ನಂತರ ಅಂಗಾಂಗಳನ್ನು ದಾನ ಕುರಿತು ಸಾರ್ವಜನಿಕರನ್ನು ಪ್ರೇರೇಪಿಸಲು ಈಗಾಗಲೇ ಬೆಂಗಳೂರಿನಲ್ಲಿ ಇನ್​ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಆಂಡ್ ಆರ್ಗನ್ ಟ್ರಾನ್ಸ್​ಪ್ಲಾಂಟ್ ಸಂಸ್ಥೆ ಪ್ರಾರಂಭಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ನಿಮ್ಹಾನ್ಸ್ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಲಾಗುವುದು.

ನಮ್ಮ ಕ್ಲಿನಿಕ್: ರಾಜ್ಯದ ಪ್ರಮುಖ ನಗರಗಳಲ್ಲಿ 438 ‘ನಮ್ಮ ಕ್ಲಿನಿಕ್’ ಗಳನ್ನು ಸ್ಥಾಪಿಸಲಿದ್ದು, ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಾರ್ಡ್​ಗಳಲ್ಲಿ ಇವುಗಳನ್ನು ಪ್ರಾರಂಭಿಸಲಾಗುವುದು. ಈ ಕ್ಲಿನಿಕ್​ಗಳಲ್ಲಿ ಅಸಾಂಕ್ರಾಮಿಕ ರೋಗಗಳ ಪತ್ತೆ ಮಾಡಲಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ತಜ್ಞರ ಬಳಿ ಕಳುಹಿಸುವ ಸೇವೆ ಒದಗಿಸಲಾಗುವುದು.

  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2022-23ನೇ ಸಾಲಿನಲ್ಲಿ 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಇವು ಮಹಿಳಾ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಮತ್ತು ಸಲಹೆ ನೀಡುವ ಕ್ಷೇಮ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.
  • ವಿದ್ಯಾರ್ಥಿನಿಯರಲ್ಲಿ ಋತು ಚಕ್ರದ ನೈರ್ಮಲ್ಯ ಕಾಪಾಡಲು ಸ್ಯಾನಿಟರಿ ನ್ಯಾಪ್ಕೀನ್ ವಿತರಿಸುವ ‘ಶುಚಿ ಯೋಜನೆ’ ಯನ್ನು ಉತ್ತಮಪಡಿಸಲಿದ್ದು, ಮಧ್ಯಪ್ರದೇಶ ಮಾದರಿಯಲ್ಲಿ ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮೆನ್ ಸ್ಟು›ಯಲ್ ಕಪ್ ವಿತರಿಸಲಾಗುವುದು.
  • ಪ್ರಸ್ತುತ ನೀಡುತ್ತಿರುವ ಉಚಿತ ಡಯಾಲಿಸಿಸ್ ಸೇವೆಯನ್ನು ಮತ್ತಷ್ಟು ಬಲಪಡಿಸಿ ಪ್ರತಿ ತಿಂಗಳಿಗೆ ಈಗಿರುವ 30 ಸಾವಿರ ಡಯಾಲಿಸಿಸ್ ಸೈಕಲ್​ಗಳನ್ನು 60 ಸಾವಿರ ಸೈಕಲ್​ಗಳಿಗೆ ಹೆಚ್ಚಿಸಲು 20 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ.

ಹೆದ್ದಾರಿಗೆ 3500 ಕೋಟಿ ರೂ.: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಹಂತ-4 ರ ಘಟ್ಟ-2 ರಲ್ಲಿ ಒಟ್ಟು 2,275 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು 3,500 ಕೋ.ರೂ.,ಗಳಲ್ಲಿ ಅಭಿವೃದ್ಧಿಪಡಿಸುವ ಮೂಲಕ ಅಭಿವೃದ್ಧಿ ಹೆದ್ದಾರಿಗೆ ಬೊಮ್ಮಾಯಿ ಸರ್ಕಾರ ಸಂಕಲ್ಪ ಮಾಡಿದೆ. ಎಸ್​ಹೆಚ್​ಡಿಪಿ ಫೇಸ್-4, ಘಟ್ಟ-3ರಡಿ ಕೆಶಿಪ್-1 ಮತ್ತು ಕೆಶಿಪ್-2 ಯೋಜನೆಗಳಡಿ ಅಭಿವೃದ್ಧಿಪಡಿಸಿದ 1,008 ಕಿ.ಮೀ.,ಉದ್ದದ ರಾಜ್ಯ ಹೆದ್ದಾರಿ ಮರುಡಾಂಬರೀಕರಣಕ್ಕೆ ಬಜೆಟ್​ನಲ್ಲಿ 440 ಕೋ.ರೂ., ಮೀಸಲಿರಿಸಲಾಗಿದೆ. ಇದಲ್ಲದೆ, ರಾಜ್ಯದ 55 ಪ್ರಮುಖ ಸೇತುವೆಗಳ ಪುನರ್ ನಿರ್ವಣವನ್ನು ಕೆ.ಆರ್.ಡಿ.ಸಿ.ಎಲ್ ವತಿಯಿಂದ ಕೈಗೊಳ್ಳಲು ಯೋಜನಾ ವರದಿ ತಯಾರಿಸಲು ಬಜೆಟ್​ನಲ್ಲಿ ಘೋಷಿಸಲಾಗಿದೆ.

ಬೈಪಾಸ್ ರಸ್ತೆಗೆ ಕೇಂದ್ರದ ನೆರವು: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಸ್ಕಿ, ಸಿಂಧನೂರು, ಗದಗ ಹಾಗೂ ಯಾದಗಿರಿ ನಗರಗಳಿಗೆ ಬೈ-ಪಾಸ್ ರಸ್ತೆ ನಿರ್ವಣವನ್ನು ಕೈಗೊಳ್ಳಲಾಗುವುದು. ಈ ಯೋಜನೆಗಳಿಗೆ ಅವಶ್ಯಕವಿರುವ ಭೂಸ್ವಾಧೀನ ವೆಚ್ಚದಲ್ಲಿ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ತಾತ್ತಿ್ವಕ ಒಪ್ಪಿಗೆ ನೀಡಲಾಗಿದೆ. ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿರುವ ನದಿಗಳಲ್ಲಿ ಹೂಳೆತ್ತುವಿಕೆ ಹಾಗೂ ಹೊಸ ಕೆರೆಗಳನ್ನು ನಿರ್ವಿುಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಹೊಸ ಯೋಜನೆ ರೂಪಿಸುವುದಾಗಿ ಬಜೆಟ್​ನಲ್ಲಿ ಸರ್ಕಾರ ಘೋಷಿಸಿದೆ.

ಐದು ಲಕ್ಷ ಮನೆ ನಿರ್ಮಾಣದ ಗುರಿ

  • ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಿದ್ದು, 5 ಲಕ್ಷ ಹೊಸ ಮನೆಗಳ ಗುರಿಯನ್ನು ಹೊಂದಿದ್ದು, ಇದಕ್ಕಾಗಿ 6,612 ಕೋಟಿ ರೂ. ಅಂದಾಜು ವೆಚ್ಚ ಮಂಜೂರು ಮಾಡಿದೆ.
  • 75ನೇ ಸ್ವಾತಂತ್ರದ ಅಮೃತ ಮಹೋತ್ಸವ ಸವಿ ನೆನಪಿಗಾಗಿ ಅಮೃತ ಗ್ರಾಮೀಣ ವಸತಿ ಯೋಜನೆ ಅಡಿ ಆಯ್ದ 750 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಸತಿ ರಹಿತ ಮತ್ತು ನಿವೇಶನ ರಹಿತರನ್ನು ಗುರುತಿಸಿ ಸೂರು ಕಲ್ಪಿಸಲಾಗುವುದು.
  • ಮನೆಗಳು ಹಾಗೂ ವಸತಿ ಬಡಾವಣೆಗಳನ್ನು ನಿರ್ವಿುಸಲು ಅವಶ್ಯಕವಿರುವ ಹಲವು ಇಲಾಖೆಗಳ ಅನುಮತಿ ಪಡೆಯುವ ಪ್ರಕ್ರಿಯೆ ಸರಳೀಕರಿಸಲಾಗುವುದು ಎಂದು ಘೋಷಿಸಲಾಗಿದೆ.
  • ಸರ್ಕಾರಿ ಮಾಲೀಕತ್ವದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಅಂದಾಜು 3.36 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net