'ಪ್ರೀತ್ಸು ತಪ್ಪೇನಿಲ್ಲ' ಹೀರೋಯಿನ್​ ಈಗ ಲೋಕಸಭಾ ಸದಸ್ಯೆ!

rachana
Published on

ಕೋಲ್ಕತ್ತಾ: ಕನ್ನಡದ ಕ್ರೇಜಿ ಸ್ಟಾರ್​ ರವಿಚಂದ್ರನ್​ ಜೊತೆ 2ಚಲನಚಿತ್ರಗಳಲ್ಲಿ ನಟಿಸಿದ್ದ ಹೀರೋಯಿನ್​ ಈ ಬಾರಿ ಸಂಸತ್​ ಪ್ರವೇಶಿಸಲಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಆ ನಟಿ ಬೇರಾರು ಅಲ್ಲ, 23 ವರ್ಷಗಳ ಹಿಂದೆ ಬಂದ ಪ್ರೀತ್ಸು ತಪ್ಪೇನಿಲ್ಲ ಚಿತ್ರದ ಹೀರೋಯಿನ್​ ರಚನಾ ಬ್ಯಾನರ್ಜಿ.

ನಟಿ, ಉದ್ಯಮಿ, ದೂರದರ್ಶನ ನಿರೂಪಕಿ, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಟಿಸಿರುವ ರಚನಾ ಬ್ಯಾನರ್ಜಿಗೆ ತೃಣಮೂಲ ಕಾಂಗ್ರೆಸ್, ಪಶ್ಚಿಮ ಬಂಗಾಳದ ಹೂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಈಗ ಆಕೆ ಚುನಾವಣೆಯಲ್ಲಿ ಗೆದ್ದಿದ್ದು, ಲೋಕಸಭೆ ಪ್ರವೇಶಿಸುವಂತಾಗಿದೆ.

ರಚನಾ ಬ್ಯಾನರ್ಜಿ, ಮೇ 2000ರಲ್ಲಿ ಬಿಡುಗಡೆಯಾದ ’ಪ್ರೀತ್ಸು ತಪ್ಪೇನಿಲ್ಲ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ವಿ.ಎಸ್ ರೆಡ್ಡಿ ನಿರ್ದೇಶಿಸಿದ ಮತ್ತು ಜಿವಿಜಿ ರಾಜು ನಿರ್ಮಿಸಿದ ಈ ಚಿತ್ರದಲ್ಲಿ ರವಿಚಂದ್ರನ್, ರಚನಾ ಬ್ಯಾನರ್ಜಿ, ಸುಮನ್ ನಾಗರ್ಕರ್, ಶ್ರೀನಿವಾಸಮೂರ್ತಿ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು.

ಇದಾದ ನಂತರ, ಏಪ್ರಿಲ್ 2001ರಲ್ಲಿ ಬಿಡುಗಡೆಯಾದ ’ಉಸಿರೆ’ ಚಿತ್ರದಲ್ಲೂ ರಚನಾ ಬ್ಯಾನರ್ಜಿ ನಾಯಕಿಯಾಗಿ ನಟಿಸಿದ್ದರು. ಪ್ರಭು ಸೊಲೊಮನ್ ನಿರ್ದೇಶಿಸಿದ್ದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ರವಿಚಂದ್ರನ್, ರಚನಾ, ಪ್ರಕಾಶ್ ರಾಜ್, ಸಾಧು ಕೋಕಿಲಾ, ದೊಡ್ಡಣ್ಣ ಮುಂತಾದವರಿದ್ದರು.

ರಚನಾ, ಕನ್ನಡ ಸೇರಿದಂತೆ 4ಭಾಷೆಗಳಲ್ಲಿ ನಟಿಸಿದ್ದರು. ಆ ನಂತರ ಅವರು ಚಿತ್ರರಂಗದಿಂದ ದೂರ ಸರಿದು ವಿವಾಹವಾದರು ಮತ್ತು ನಂತರ ವಿಚ್ಛೇದನ ಪಡೆದರು. ಅಂದಿನಿಂದ, ಈ ಒಂಟಿಯಾಗಿದ್ದ ಅವರು ಇದೀಗ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.

ಕೋಲ್ಕತ್ತಾದಲ್ಲಿ ಜನಿಸಿದ ರಚನಾ ಬ್ಯಾನರ್ಜಿಗೆ ಮಮತಾ ಬ್ಯಾನರ್ಜಿ ಹೂಗ್ಲಿ ಕ್ಷೇತ್ರದ ಟಿಕೆಟ್ ಅನ್ನು ನೀಡಿದ್ದರು. 2009 ಮತ್ತು 2014ರಲ್ಲಿ ಈ ಕ್ಷೇತ್ರದಲ್ಲಿ ಟಿಎಂಸಿಯ ರತನ್ ದೇ ಗೆದ್ದಿದ್ದರೆ, 2019ರ ಚುನಾವಣೆಯಲ್ಲಿ ಬಿಜೆಪಿಯ ಲಾಕೆಟ್ ಚಟರ್ಜಿ ಗೆಲುವು ಸಾಧಿಸಿದ್ದರು. ಈ ಬಾರಿ, ಬಿಜೆಪಿ ಲಾಕೆಟ್ ಚಟರ್ಜಿಗೆ ಟಿಕೆಟ್ ನೀಡಿತ್ತು. ರಚನಾ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net