ಕೃಷಿ ಸುಭಿಕ್ಷ: ಅಹಮಿಕೆ ಇಳಿಕೆ, ಆರ್ಥಿಕ ಚೇತರಿಕೆ

BS Dwarakanath Prediction
Published on
ಹೊಸ ಸಂವತ್ಸರ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಮಳೆ, ಬೆಳೆ ಸರಿಯಾಗಿ ಆಗಿ, ರೈತರ ಬದುಕು ಉತ್ತಮಗೊಳ್ಳಬೇಕು ಎಂಬ ಆಶಯವೂ ಇದೆ. ಹಾಗೆಯೇ, ಈ ವರ್ಷ ರಾಜ್ಯ, ರಾಷ್ಟ್ರ ರಾಜಕಾರಣ ಹೇಗಿರಲಿದೆ, ಸ್ಥಿತ್ಯಂತರಗಳೇನು, ಗ್ರಹಗಳ ಬದಲಾವಣೆಯ ಪರಿಣಾಮವೇನು ಇವುಗಳ ಕುರಿತಾದ ವಿವರ ಇಲ್ಲಿದೆ.

ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ|

ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ||

ಸನ್ನಿಧಾನ ಜಗದ್ಗುರು ಶ್ರೀ ಭಾರತೀ ತೀರ್ಥ ಗುರುಗಳಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತ, ವಿಶ್ವಕ್ಕೆ ಒಳ್ಳೆಯದಾಗಲಿ ಎಂಬ ಆಶಯದೊಂದಿಗೆ ಶ್ರೀ ಶುಭಕೃತ ನಾಮ ಸಂವತ್ಸರದಲ್ಲಿ ಸಂವತ್ಸರ ಫಲವನ್ನು ಪ್ರಸ್ತಾಪಿಸುವುದಾದರೆ, ಗ್ರಹಗಳ ಬದಲಾವಣೆ ಒಂದಷ್ಟು ಅಚ್ಚರಿಯ ಪರಿಣಾಮ ಬೀರುವುದು ನಿಶ್ಚಿತ, ಒಂದಷ್ಟು ಸಮಾಧಾನಕರ ಸಂಗತಿ ನಿರೀಕ್ಷಿಸಬಹುದಾಗಿದೆ.

ಏಪ್ರಿಲ್ 2ರ ಶನಿವಾರ ಯುಗಾದಿ ಬಂದಿದೆ. ಈ ವರ್ಷದ ಅಧಿಪತಿ ಶನಿ. ಅವನು ಬಂದರೆ ಪಾಠ ಕಲಿಸಿ ಹೋಗುವವನೇ. ಈ ನಡುವೆಯೂ ಕೃಷಿ ಕ್ಷೇತ್ರದಲ್ಲಿ ಸುಭಿಕ್ಷ ಉಂಟಾಗಲಿದೆ. ಪ್ರಜಾ ಆರೋಗ್ಯದ ವಿಚಾರದಲ್ಲೂ ಸಮಾಧಾನ ಪಡುವಂತಿರಲಿದೆ.

ಶನಿ ರಾಜನಾಗಿರುವುದರಿಂದ ಇಂಧನ ಬೆಲೆ ಹೆಚ್ಚಾಗಿ ಅದರ ಹೊರೆ ಆಹಾರ ಪದಾರ್ಥಗಳ ಮೇಲೆ ಆಗಲಿದೆ. ಇನ್ನು ಈ ರಾಹು ಕೇತುಗಳು ವೃಷಭ ತುಲಾ ಬಿಡುವುದು ಒಳ್ಳೆಯದಾಯಿತು. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಜನರ ದ್ವೇಷಭಾವನೆ ಕಡಿಮೆಯಾಗುತ್ತದೆ. ಕಾರ್ತಿಕ ಮಾಸದ ನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಹೋಗಲಿದೆ. ವಿಜ್ಞಾನ-ತಂತ್ರಜ್ಞಾನ ಇನ್ನಷ್ಟು ಎತ್ತರಕ್ಕೇರಲಿದೆ. ಇಲ್ಲಿವರೆಗೆ ಉದ್ಯೋಗಾವಕಾಶಗಳು ಇರಲಿಲ್ಲ, ಅವು ಭರ್ತಿಯಾಗಿ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಯ ಆಶಾಭಾವನೆ ಖಂಡಿತ ಬರಲಿದೆ.

ಗುರುವು ಮಕರದಿಂದ ಕುಂಭ, ಕುಂಭದಿಂದ ಮೀನ ಹೀಗೆ ಈ ಒಂದು ವರ್ಷದಲ್ಲಿ ಮಕರ, ಕುಂಭ, ಮೀನವನ್ನು ಮುಟ್ಟುತ್ತಾನೆ. ಪ್ರಪಂಚದಲ್ಲಿ ಅಲ್ಲೋಲಕಲ್ಲೋಲ ಆಗುತ್ತದೆ. ಆದರೆ ರಾಹು ಮೇಷ ರಾಶಿಗೆ ಹೋಗುತ್ತಾನೆ. ಏಪ್ರಿಲ್ 13ರಿಂದ 28ರವರೆಗೆ ಮಾತ್ರವೇ ಕುಂಭದಲ್ಲಿ ಶನಿ ಇದ್ದು, ಮತ್ತೆ ಹಿಂದಕ್ಕೆ ಬರಲಿದೆ. ಶನಿ ಹಿಂದೆ ಮುಂದೆ ಬರುತ್ತದೆ. ಈ ಬದಲಾವಣೆಯೇ ಗೊಂದಲಗಳ ಸೃಷ್ಟಿಗೆ ಕಾರಣವಾಗುತ್ತದೆ.

ಏಪ್ರಿಲ್ 27ರಂದು ಶನಿಯು ಅಲ್ಪಕಾಲಕ್ಕೆ ಮಕರ ರಾಶಿ ಬಿಟ್ಟು ಕುಂಭರಾಶಿಗೆ ಹೋಗುತ್ತಾನೆ. ಮಕರ ರಾಶಿಯಲ್ಲಿ ಶನಿ ಇರುವುದರಿಂದ ಯುದ್ಧಭೀತಿ ಇರಲಿದೆ. ಶನಿ ರಾಜನಾದರೂ ಈಶ್ವರಾಂಶ ಇರುವುದರಿಂದ ಈಶ್ವರನ ಪೂಜೆ, ರುದ್ರ ಪಾರಾಯಣ, ಶಿವಸ್ಮರಣೆ, ದ್ವಾದಶ ಲಿಂಗಗಳ ದರ್ಶನ, ಭೀಮಶಂಕರ, ನಂಜನಗೂಡು ಶ್ರೀಕಂಠೇಶ್ವರ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ. ಸಹೃದಯದಿಂದ ಪ್ರಾರ್ಥನೆ ಮಾಡಿದರೆ ಶನಿಯಿಂದ ಬರುವ ತೊಂದರೆ ಕರಗುತ್ತದೆ. ಭೀತಿ ದೂರವಾಗಲು ಈಶ್ವರ ಪೂಜೆಯೊಂದೇ ಪರಿಹಾರ. ಅದರಲ್ಲೂ ತಿಲಾ ಹೋಮ, ತಿಲಾ ದಾನ, ತಿಲಾ ತೈಲ ದೀಪ, ಅನನ್ಯವಾಗಿ ಯಜುರ್ವೆದ ಮಧ್ಯ ಭಾಗವಾದ ರುದ್ರಾಧ್ಯಾಯ ಪಾರಾಯಣ ಮಾಡಿ ತಿಲಾದಲ್ಲಿ ಹೋಮ ಮಾಡಿದರೆ ಈಶ್ವರನ ಕೃಪೆಗೆ ಪಾತ್ರರಾಗಬಹುದು.

ಇನ್ನು ಕುಂಭ ಹಾಗೂ ಮಕರದಲ್ಲಿ ಶನಿಸಂಚಾರ ಕ್ಲಿಷ್ಟ ಕಾಲ. ಅಷ್ಟು ಸುಲಭವಾಗಿ ಈ ಕಾಲ ದಾಟಲು ಆಗಲ್ಲ. ಈ ವರ್ಷದ ಚೈತ್ರ ಮಾಸದಲ್ಲಿ ಏಪ್ರಿಲ್ 7ರಂದು ಕುಂಭಕ್ಕೆ ಕುಜ ಹಾಗೂ 8ರಂದು ಮೇಷಕ್ಕೆ ಬುಧ, 12ರಂದು ಮೇಷಕ್ಕೆ ರಾಹು ಕೇತು, 13ರಂದು ಮೀನರಾಶಿಗೆ ಗುರು, 14ರಂದು ಸೂರ್ಯ, ಆರು ಗ್ರಹಗಳು ಒಂದೇ ಮಾಸದಲ್ಲಿ ಬದಲಾಗುತ್ತವೆ. 9 ಗ್ರಹಗಳಲ್ಲಿ 6 ಗ್ರಹಗಳ ಅಧಿಪತ್ಯ ಬದಲಾವಣೆಯಾದರೆ ಅಲ್ಲೋಲ ಕಲ್ಲೋಲವೇ. ಕುಜ ಹಾಗೂ ಶನಿ ಒಟ್ಟಿಗೆ ಸೇರಿ ಅವರು ಏಪ್ರಿಲ್ 7ರಿಂದ 17ರವರೆಗೂ ಒಂದೇ ಜಾಗದಲ್ಲಿ ಇರುತ್ತಾರೆ. ಒಂದೇ ಮನೆಯಲ್ಲಿದ್ದರೆ ಮಾನವ ಕಲ್ಯಾಣಕ್ಕೆ ಧಕ್ಕೆಯಾಗಲಿದೆ. ಅಕಾಲಿಕ ಮಳೆ, ಯುದ್ಧಭೀತಿ, ಉತ್ತರ ಭಾರತ ಹಿಮಾಲಯ ಕಡೆ ಹಾನಿಯ ಜತೆ ಉಗ್ರರ ಉಪಟಳ ಹೆಚ್ಚಾಗಬಹುದು. ಪಾಕಿಸ್ತಾನದ ಪರಿಸ್ಥಿತಿ ಬಿಗಡಾಯಿಸಲಿದೆ. ಶ್ರೀಲಂಕಾ, ಬಾಂಗ್ಲಾದೇಶ ದುಸ್ಥಿತಿಗೆ ತಲುಪಲಿವೆ. ಶನಿಯು ಕುಂಭ ರಾಶಿಗೆ ಬಂದಾಗ ಮಹತ್ತರ ಬದಲಾವಣೆ ಆಗುತ್ತದೆ. ಅಂದರೆ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬಹುದು. ದೇಶದ್ರೋಹಿಗಳು ಬಾರದಂತೆ ಶನಿ ತಡೆಯುತ್ತಾನೆ.

ಗ್ರಹಣದ ಪರಿಣಾಮವೇನು?: ಏಪ್ರಿಲ್ 30, ಮೇ 16ರಂದು ಎರಡು ಗ್ರಹಣಗಳೂ ಹೊರ ರಾಜ್ಯದಲ್ಲಿ ಆಗುತ್ತವೆ, ನಮಗೆ ಕಾಣುವುದಿಲ್ಲ. ಅದರಿಂದ ಪರಿಣಾಮ ಇಲ್ಲ. ಆದರೆ, 2022ರ ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ಎರಡು ಗ್ರಹಣಗಳು ಆಗುತ್ತವೆ. ಸಮುದ್ರ ಉಕ್ಕಿ ಹರಿಯಬಹುದು. ಗಂಗಾಪ್ರವಾಹ ಉಂಟಾಗಬಹುದು. ಆದರೆ, ಗ್ರಹಣ ಕೆಟ್ಟದ್ದು ಮಾಡಲ್ಲ. ಅನಿಷ್ಟವನ್ನು ದೂರ ಮಾಡುತ್ತದೆ.

ರಾಜ್ಯ ರಾಜಕಾರಣದಲ್ಲಿ ಸ್ಥಾನಪಲ್ಲಟ: ‘ಬೊಮ್ಮಾಯಿ ಸರ್ಕಾರ’ ಅನ್ನುತ್ತಾರೆ ಅಷ್ಟೆ, ಆದರೆ ಅವರನ್ನು ಯಾವ ಕೆಲಸ ಮಾಡಲೂ ಸಲೀಸಾಗಿ ಬಿಟ್ಟಿಲ್ಲ. ಗ್ರಹಗಳ ಪರಿಸ್ಥಿತಿಯಿಂದ ಆಳುವವರು ಚೆನ್ನಾಗಿಲ್ಲ, ವಿರೋಧ ಮಾಡುವವರೂ ಚೆನ್ನಾಗಿಲ್ಲ. ಪ್ರಜೆಗಳ ನಿರೀಕ್ಷೆ ಮಟ್ಟದಲ್ಲಿ ಇಬ್ಬರೂ ಇಲ್ಲ. ಈಗ ರಾಜ್ಯಭಾರ ಮಾಡುವವರು ಮುಂದೆ ಮಾಡುವುದಿಲ್ಲ ಎಂಬುದು ಖಚಿತವಾಗಿ ಕಾಣಿಸುತ್ತಿದೆ. ಪುನಃ ಕರ್ನಾಟಕದ ಕೋಟೆ ಹಿಡಿಯುವುದು ತುಂಬ ಕಷ್ಟ ಎನಿಸುತ್ತಿದೆ. ಆಳುವ ಪಕ್ಷದ ನಾಯಕತ್ವ ವಹಿಸಿಕೊಂಡವರು ಏಪ್ರಿಲ್ 14ರಿಂದ ಮೇ 14ರೊಳಗೆ ಸರ್ಕಾರಕ್ಕೆ ಬೇರೆ ಸ್ವರೂಪ ಕೊಡುತ್ತಾರೆ. ಮಂತ್ರಿಮಂಡಲ ಬದಲಾಗಲಿದೆ. ಇಬ್ಬರು ಮಂತ್ರಿಗಳಿಗೆ ಗಂಭೀರ ತೊಂದರೆಯಾಗುತ್ತದೆ. ಮುಂಚಿತವಾಗಿ ಚುನಾವಣೆಗೆ ಹೋಗುವ ಸಂದರ್ಭ ಕಾಣಿಸುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಅವಧಿ ಪೂರ್ಣ ಆಗಲಿದೆ. ಹಾಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಕಡಿಮೆ ಇದೆ.

ಇರಲಿ ಎಚ್ಚರ: ಈಶಾನ್ಯ ದಿಕ್ಕಿನಲ್ಲಿ ಗಾಳಿ ಹೆಚ್ಚಾಗಿ ಬಂಗಾಳ, ತಮಿಳುನಾಡು, ಕೇರಳದಲ್ಲಿ ಜಲಾವೃತವಾಗಿ ದುಃಖ ಸೃಷ್ಟಿಸುತ್ತದೆ. ರಾಜ್ಯದ ಕರಾವಳಿಯಲ್ಲೂ ಎಚ್ಚರ ಅಗತ್ಯ. ಏಪ್ರಿಲ್ 14ರಂದು ರಾಹು, ಕೇತು ಬದಲಾವಣೆ ಆಗುತ್ತದೆ. ಭಾರತದ ದೃಷ್ಟಿಯಿಂದ ಈ ಬದಲಾವಣೆ ಒಳ್ಳೆಯದಾಗಿ ಕಾಣುತ್ತಿದೆ. ಮಳೆ ತಕ್ಕ ಮಟ್ಟಿಗೆ ಆಗುತ್ತದೆ. ಬೆಳೆ ಚೆನ್ನಾಗಿ ಆಗುತ್ತದೆ. ಮಕರ ಕುಂಭಗಳಲ್ಲಿ ಇನ್ನೂ ಗುರು ಸಂಚಾರ ಇದೆ. ಬೆಳೆಗೆ ಹಾನಿ ಆಗುವುದಿಲ್ಲ. ಆದರೆ, ಮಾರ್ಚ್, ಏಪ್ರಿಲ್​ನಿಂದ ಅಕಾಲಿಕ ಮಳೆ ಆರಂಭವಾಗಲಿದೆ. ಗೋವಾದಲ್ಲಿ ಮತೀಯ ಗಲಭೆ ಆಗಬಹುದು.

ರಾಜಕೀಯ ಲೆಕ್ಕಾಚಾರ: ಶನಿ-ಗುರು ಸಂಚಾರದ ವೇಳೆ ರಾಷ್ಟ್ರ ಕಟ್ಟುವುದರಲ್ಲಿ ಪರ್ಯಾಯ ಪಕ್ಷಗಳು ಕೂಡ ಸಾಕಷ್ಟು ಮುನ್ನಡೆ ಪಡೆದು ರಾಷ್ಟ್ರ ಆಳುವವರ ಕೈಯನ್ನು ಕಟ್ಟಿಹಾಕಲು ಯತ್ನಿಸಬಹುದು. ಧರ್ಮವೇ ಧ್ಯೇಯವಾದರೆ ಶನಿಯೇ ರಕ್ಷಿಸುವನು. ಕುಂಭ ರಾಶಿಯಲ್ಲಿ ಶನಿ ಇದ್ದಾಗ ರಾಷ್ಟ್ರವನ್ನು ಆಳುವವರಿಗೆ ನಿರೀಕ್ಷಿತ ಫಲ ಸಿಗಲ್ಲ. ಆದರೆ, ಮುಂದಿನ ದಿನಗಳಲ್ಲಿ ಆಳುವವರ ಅಹಂಕಾರ, ದಬ್ಬಾಳಿಕೆ ಇಳಿಯುತ್ತದೆ. ಸಜ್ಜನಿಕೆಯ ರಾಜಕಾರಣ ನೋಡಬಹುದು.

ಪ್ರಧಾನಿಗೆ ಗುರುಬಲ ಅಗತ್ಯ

ಓಂ ದತ್ತಾತ್ರೇಯಾಯ ವಿದ್ಮಹೇ

ಅತ್ರಿಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್

ರಾಶಿಗಳ ಪಲ್ಲಟದಿಂದಾಗಿ ಪ್ರಧಾನಮಂತ್ರಿಗೆ ಬೇಹುಗಾರಿಕೆ ಬಲಪಡಿಸಬೇಕಾಗುತ್ತದೆ. ಮುಂದಿನ ಯುಗಾದಿವರೆಗೂ, ಅಂದರೆ ಶುಭಕೃತುವಿನಿಂದ ಶೋಭಕೃತವರೆಗೆ ಪ್ರಾಣಭಯ ಇರಲಿದೆ. ಅದನ್ನು ದಾಟಬೇಕಾದರೆ ದೃಢವಾದ ಗುರು ನಂಬಿಕೆ ಅತ್ಯಗತ್ಯ. ಪ್ರಧಾನಿಗಳು ಗಾಣಗಾಪುರದ ದರ್ಶನ ಮಾಡಿ ಪ್ರಾರ್ಥಿಸಿದರೆ ಕಷ್ಟಗಳು ಕರಗಿ ದೇಶಕ್ಕೂ ಸುಭಿಕ್ಷ ಒದಗಿಬರಲಿದೆ. ಈ ಶನಿ ಸಂಚಾರ ಕುಂಭದಲ್ಲಿ ನಡೆಯುವಾಗ ಧರ್ಮ ಮತ್ತು ನ್ಯಾಯವನ್ನು ಎತ್ತಿ ಹಿಡಿಯುತ್ತದೆ.

ಆರ್ಥಿಕ ಪರಿಸ್ಥಿತಿ: ಆರು ಗ್ರಹ ಒಟ್ಟಿಗೆ ಮುಂದೆ ಹೋಗುವುದರಿಂದ ಆಹಾರ ಧಾನ್ಯ ಬೆಲೆ ಏರುತ್ತಲೇ ಹೋಗಲಿದೆ. ಇಂಧನ ಸೇರಿ ಸಾಮಾನ್ಯ ದಿನಬಳಕೆ ವಸ್ತುಗಳು ದುಬಾರಿಯಾಗಲಿವೆ. ಚಿನ್ನ, ಬೆಳ್ಳಿ ಮರೆತು ಬಿಡುವುದು ಒಳ್ಳೆಯದು. ನೌಕರಿ ಸೃಷ್ಟಿ ಮಾಡದಿದ್ದರೆ ಜನರು ರೊಚ್ಚಿಗೇಳುತ್ತಾರೆ. ಆಗಸ್ಟ್ ಬಳಿಕ ಸಿನಿಮಾ ಉದ್ಯಮ ಚೇತರಿಸಿಕೊಳ್ಳಲಿದೆ.

ಆರೋಗ್ಯ ಭಾಗ್ಯ: ಕೋವಿಡ್ ಈಗಲೇ ಪರಿಹಾರ ಆಗಲ್ಲ. ಪ್ರಾಣಭೀತಿ ಇರುವುದಿಲ್ಲ ವಾದರೂ ಬೇರೆ ಬೇರೆ ಸ್ವರೂಪದಲ್ಲಿ ಸಣ್ಣಸಣ್ಣದಾಗಿ ಕಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net