

ಕೋಲಾರ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಂಚನೆಯಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಸೈಬರ್ ಅಪರಾಧ ವಿಭಾಗದ ವೃತ್ತ ನಿರೀಕ್ಷಕ ಎಸ್.ಆರ್.ಜಗದೀಶ್ ಹೇಳಿದರು.
ನಗರದ ಗೋಕುಲ ಕಾಲೇಜಿನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ತಡೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹಣ ಕಳೆದುಕೊಂಡು ಬಹುತೇಕರು ದೂರು ನೀಡಲು ವಿಳಂಬ ಮಾಡಬೇಡಿ. ಕೂಡಲೇ ಪೊಲಿಸರಿಗೆ ದೂರು ನೀಡಬೇಕು ಎಂದು ತಿಳಿಸಿದರು.
ಆನ್ಲೈನ್ನಲ್ಲಿ ಕೇವಲ ಸ್ಕ್ರೊಲಿಂಗ್ ಮಾಡಿ ಹಣ ಸಂಪಾದನೆ ಮಾಡಬಹುದು ಎಂದು ಸೈಬರ್ ವಂಚಕರು ಜನರನ್ನು ನಂಬಿಸುತ್ತಾರೆ. ಕೆಲ ದಿನಗಳ ಕಾಲ ಅದಕ್ಕೆ ವೇತನ ರೂಪದಲ್ಲಿ ನೀಡಿ ನಂತರ ಹೂಡಿಕೆ ಮಾಡಿದರೆ ಹೆಚ್ಚು ಹಣ ಬದಲಿದೆ ಎಂದು ಆಸೆ ಹುಟ್ಟಿಸುತ್ತಾರೆ. ಆರಂಭದಲ್ಲಿ ಕಡಿಮೆ ಮೊತ್ತ ಪಡೆದು ವಾಪಸ್ ನೀಡುತ್ತಾರೆ. ನಂತರ ದೊಡ್ಡ ಮಟ್ಟದಲ್ಲಿ ಮೊತ್ತ ಹಾಕಿಸಿಕೊಂಡು ಸಂಪರ್ಕಕ್ಕೆ ಸಿಗುವುದಿಲ್ಲ, ಇನ್ನದಾರು ಇಂತಹ ಪ್ರಕರಣಗಳಿಂದ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಸಿದರು.
ಮಧ್ಯ ವಯಸ್ಕರನ್ನು, ನಿವೃತ್ತ ನೌಕರರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಬಂಧನ ಎಂಬ ನಾಟಕವಾಡುತ್ತಾರೆ. ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಸಿಬ್ಬಂದಿ, ದೆಹಲಿ, ಮುಂಬೈ ಪೊಲೀಸ್ ಎಂದು ನಂಬಿಸುತ್ತಾರೆ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಪ್ಯಾನ್ ಸಂಖ್ಯೆ ನೀಡಿ ಎಂದು ಕೇಳುತ್ತಾರೆ. ಇದಕ್ಕು ಮುಂಚೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಇತಂಹುದಕ್ಕೆ ಗಿವಿಗೋಡಬಾರದು ಎಂದು ಸಲಹೆ ನೀಡಿದರು.
ವಂಚಕರು ನಕಲಿ ಆ್ಯಪ್ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಮೂಲಕ ಜನರನ್ನು ಸೆಳೆದು ನಂತರ ವ್ಯಾಟ್ಸ್ಆ್ಯಪ್ ಇತರೆ ಸಾಮಾಜಿಕ ಜಾಲತಾಣ ಗುಂಪುಗಳನ್ನು ರಚಿಸಿ ಸದಸ್ಯರನ್ನು ಸೇರಿಸಿಕೊಳ್ಳುತ್ತಾರೆ. ಎಪಿಕೆ, ಲಿಂಕ್ಗಳ ಮೂಲಕ ವಂಚಿಸುವ ಪ್ರಯತ್ನ ಮಾಡುತ್ತಾರೆ. ಅನಾಮದೆಯ ದೂರವಾಣಿ ಕರೆಗಳನ್ನು ಸ್ವೀಕರಿಸಬಾರದು ಎಂದು ಎಂದರು.
ಸೈಬರ್ ಅಪರಾಧ ನಡೆದ ತಕ್ಷಣ 1930 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕು, ಇದರಿಂದಾಗಿ ಪ್ರಕರಣ ದಾಖಲಿಸಿಕೊಂಡು ಪತ್ತ ಹಚ್ಚಲು ಸಾಧ್ಯವಾಗುತ್ತದೆ. ಇನ್ನು ಮುಂದೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.