ಸಮವಸ್ತ್ರದಲ್ಲೇ ಪೊಲೀಸ್​ ಜೋಡಿಯ ಪ್ರೀ ವೆಡ್ಡಿಂಗ್​ ಶೂಟ್: ನೆಟ್ಟಿಗರ ಪ್ರಶ್ನೆಗೆ ಹಿರಿಯ ಅಧಿಕಾರಿಯ ಉತ್ತರವಿದು….

Police Cop Shooting
Published on

ನವದೆಹಲಿ: ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತಮ್ಮಿಷ್ಟದ ಕಲ್ಪನೆಯಲ್ಲಿ ಫೋಟೋಶೂಟ್​ ಮಾಡಿಸುತ್ತದೆ. ಇದೀಗ ಹೈದರಬಾದ್​ನ ಪೊಲೀಸ್​ ಜೋಡಿಯೊಂದು ಫೋಟೋಶೂಟ್​ನಲ್ಲೂ ತಮ್ಮ ವೃತ್ತಿ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿರಿಯ ಅಧಿಕಾರಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮಹಿಳಾ ಸಬ್ ಇನ್ಸ್‌ಪೆಕ್ಟರ್ ಕೆ. ಭಾವನಾ ಅವರು ಪ್ರಸ್ತುತ ರಾಜ್ಯದ ಮೊದಲ ಮಾದರಿ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪುಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದಾರೆ ಮತ್ತು ಅವರ ಪತಿ ಸಶಸ್ತ್ರ ಮೀಸಲು ಪಡೆಯ ಎಸ್‌ಐ ರಾವೂರಿ ಕಿಶೋರ್. ಈ ಜೋಡಿ ಆಗಸ್ಟ್ 26 ರಂದು ವಿವಾಹವಾದರು.

ವಿಡಿಯೋದಲ್ಲಿ ಏನಿದೆ?: ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವಾಹನಗಳಿಂದ ಪೊಲೀಸ್ ದಂಪತಿ ಪ್ರತ್ಯೇಕವಾಗಿ ಇಳಿಯುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಆ ನಂತರ ಚಾರ್ಮಿನಾರ್ ಮತ್ತು ಲಾಡ್ ಬಜಾರ್ ಬಳಿ ದಂಪತಿ ಕಾಣಿಸಿಕೊಂಡಿದ್ದಾರೆ. ಸ್ಲೋ-ಮೋಷನ್ ಶಾಟ್‌ಗಳು ಮತ್ತು ಡ್ಯಾನ್ಸ್ ಸೀಕ್ವೆನ್ಸ್‌ಗಳೊಂದಿಗೆ ವಿಡಿಯೋ ಎಲ್ಲರನ್ನೂ ಆಕರ್ಷಿಸಿದೆ. ಇಬ್ಬರು ಸಮವಸ್ತ್ರವನ್ನು ಧರಿಸಿ ಪೊಲೀಸ್ ವಾಹನಗಳಲ್ಲಿ ಪೊಲೀಸ್ ಠಾಣೆ ಆವರಣವನ್ನು ಪ್ರವೇಶಿಸುವುದನ್ನು ತೋರಿಸುತ್ತದೆ. ಇದು ಅಧಿಕಾರ ಮತ್ತು ಸಮವಸ್ತ್ರದ ದುರುಪಯೋಗ ಎಂದು ಹಲವಾರು ನಾಗರಿಕರಿಂದ ಟೀಕೆಗೆ ಗುರಿಯಾಗಿತ್ತು.

ಬಳಕೆದಾರರೊಬ್ಬರು ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ ಆನಂದ್ ಅವರನ್ನು ಟ್ಯಾಗ್ ಮಾಡಿ ‘ಸರ್ ಇದು ಏನು? ಪ್ರೀ ವೆಡ್ಡಿಂಗ್ ಶೂಟ್‌ಗಳಿಗೆ ಪೊಲೀಸ್ ಠಾಣೆಗಳು ಲಭ್ಯವಿದೆಯೇ?’ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಸಿ.ವಿ. ಆನಂದ್​ ಪ್ರತಿಕ್ರಿಯೆ ನೀಡಿದ್ದು, ವಿಡಿಯೋವನ್ನು ಚಿತ್ರೀಕರಿಸಿದ ಜೋಡಿಗೆ ಮತ್ತು ಇತರರಿಗೆ ಕೆಲವು ಸಲಹೆ ನೀಡಿದ್ದಾರೆ. ದಂಪತಿಯ ಉತ್ಸಾಹ ಮತ್ತು ಸಮವಸ್ತ್ರದ ಮೇಲಿನ ಅವರ ಪ್ರೀತಿಯನ್ನು ಶ್ಲಾಘಿಸಿದ ಸಿವಿ ಆನಂದ್​, ಈ ವಿಡಿಯೋ "ಸ್ವಲ್ಪ ಮುಜುಗರ" ಎಂದು ಒಪ್ಪಿಕೊಂಡರು. ಆದರೆ, ದಂಪತಿಯನ್ನು ಭೇಟಿಯಾಗಿ ಆಶೀರ್ವಾದ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ನಾನು ಈ ವಿಡಿಯೋ ಮಿಶ್ರ ಪ್ರತಿಕ್ರಿಯೆಗಳನ್ನು ನೋಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ದಂಪತಿ ತಮ್ಮ ಮದುವೆಯ ಬಗ್ಗೆ ಸ್ವಲ್ಪ ಅತಿಯಾಗಿ ಉತ್ಸುಕರಾಗಿದ್ದಾರೆಂದು ತೋರುತ್ತದೆ ಮತ್ತು ಇದು ಒಂದು ದೊಡ್ಡ ಸುದ್ದಿಯೇನಲ್ಲ, ಆದರೂ ಸ್ವಲ್ಪ ಮುಜುಗರದ ಸಂಗತಿಯಾಗಿದೆ. ಪೊಲೀಸಿಂಗ್ ತುಂಬಾ ಕಠಿಣ ಕೆಲಸವಾಗಿದೆ ಎಂದು ಆನಂದ್​ ಅವರು ಎಕ್ಸ್​ (ಟ್ವಿಟರ್​) ಮಾಡಿದ್ದಾರೆ.

ಪೊಲೀಸ್ ಠಾಣಾ ಆವರಣ ಮತ್ತು ಸರ್ಕಾರಿ ವಾಹನದ ಬಳಕೆಯ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, ಇಬ್ಬರು ಪೊಲೀಸ್ ಅಧಿಕಾರಿಗಳು, ಪೊಲೀಸ್ ಇಲಾಖೆಯ ಆಸ್ತಿ ಮತ್ತು ಚಿಹ್ನೆಗಳನ್ನು ಬಳಸುವುದರಲ್ಲಿ ನನಗೆ ಯಾವುದೇ ತಪ್ಪು ಕಾಣಲಿಲ್ಲ. ಈ ಜೋಡಿ ನಮಗೆ ಮೊದಲೇ ತಿಳಿಸಿದ್ದರೆ, ಚಿತ್ರೀಕರಣಕ್ಕೆ ನಾವು ಖಂಡಿತ ಒಪ್ಪಿಗೆ ನೀಡುತ್ತಿದ್ದೆವು. ನಮ್ಮಲ್ಲಿ ಕೆಲವರಿಗೆ ಸಿಟ್ಟು ಬರಬಹುದು ಆದರೆ ಅವರನ್ನು ಭೇಟಿಯಾಗಿ ಆಶೀರ್ವದಿಸಬೇಕೆಂದು ಅನಿಸುತ್ತದೆ ಎಂದಿದ್ದಾರೆ. ಏನೇ ಆಗಲಿ ಅನುಮತಿ ಇಲ್ಲದೇ ಈ ರೀತಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. 

ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಕೆಲವು ಬಳಕೆದಾರರು "ಅಧಿಕಾರದ ದುರುಪಯೋಗ" ಕ್ಕಾಗಿ ದಂಪತಿಯನ್ನು ಖಂಡಿಸಿದರೆ, ಇತರರು ಟಾಲಿವುಡ್ ಎಂದು ಕರೆಯಲ್ಪಡುವ ದಕ್ಷಿಣ ಚಿತ್ರರಂಗವು ಪೊಲೀಸ್​ ದಂಪತಿಯ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ವಿಡಿಯೋದಿಂದ ಪಾಠ ಕಲಿಯಬೇಕಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net