

ಶಿವಮೊಗ್ಗ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಮತ್ತು ಅಂಗಡಿ ಮುಂಗಟ್ಟುಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವುದು ಪೂರ್ವ ನಿಯೋಜಿತ ಕೃತ್ಯ. ಇದಕ್ಕೆ ರಾಜ್ಯ ಸರ್ಕಾರದ ಓಲೈಕೆ ನೀತಿಯೇ ಕಾರಣ. ಸರ್ಕಾರ ತುಷ್ಟೀಕರಣದ ನೀತಿಯಿಂದ ಹೊರಬರಬೇಕೆಂದು ಆಗ್ರಹಿಸಿ ಬಜರಂಗದಳ ಹಾಗೂ ವಿಎಚ್‌ಪಿ ಕಾರ್ಯಕರ್ತರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಾಗಮಂಗಲ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನೂ ಹೌದು. ಪೊಲೀಸರು ಬಂದೋಬಸ್ತ್ ಹೆಚ್ಚಿಸಿರಲಿಲ್ಲ. ಪೊಲೀಸರ ವೈಫಲ್ಯದಿಂದಲೇ ಗಲಭೆ ನಡೆದಿದೆ. ಹೀಗಾಗಿ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಭದ್ರಾವತಿಯಲ್ಲಿ ಹಿಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದು 10 ದಿನಗಳಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಭಯವಾಗುತ್ತಿದೆ. ಹೊರಗಡೆ ಹೋಗಲು ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಬಜರಂದಗಳದ ಸಂಚಾಲಕ ರಾಜೇಶ್ ಗೌಡ, ಪ್ರಮುಖರಾದ ಪ್ರಸಾದ್, ಆನಂದ್, ಸುರೇಶ್ ಬಾಬು, ಶಾರದಾ, ಕಾವ್ಯಾ, ವಿಜಯ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.