

ಬೆಂಗಳೂರು: ರಾಜ್ಯದ ಆಯ್ದ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಸಮಗ್ರ ಶಿಕ್ಷಣ ಕರ್ನಾಟಕ ಸುತ್ತೋಲೆ ಹೊರಡಿಸಿದೆ.
2023-24 ನೇ ಸಾಲಿನಿಂದ 262 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಯೋಗಿಕವಾಗಿ ಷರತ್ತುಗಳಿಗೊಳಪಟ್ಟು ಪ್ರಾರಂಭಿಸಲು ಶಿಕ್ಷಣ ಮಂತ್ರಾಲಯದ ಪಿ.ಎ.ಬಿಯಲ್ಲಿ ಅನುಮತಿ ನೀಡಲಾಗಿದೆ. ಈ ತರಗತಿಗಳನ್ನು ಎಲ್ಲ ಪೂರ್ವ ಸಿದ್ಧತೆ ಮಾಡಿಕೊಂಡು ಆಗಸ್ಟ್‌ನಲ್ಲಿ ಆರಂಭಿಸುವಂತೆ ತಿಳಿಸಲಾಗಿದೆ.
ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರಿ ಪ್ರಾಥಮಿಕ ಶಾಲೆಗಳ ಎಸ್‌ಡಿಎಂಸಿ ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ಮಾಡಬೇಕು. ಎಲ್‌ಕೆಜಿಯ ಒಂದು ವಿಭಾಗ ಮಾತ್ರ ಪ್ರಾರಂಭಿಸಬೇಕು. ಈ ಎಲ್‌ಕೆಜಿ ತರಗತಿಗೆ 4 ವರ್ಷದಿಂದ 5 ವರ್ಷದ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕು. ಕನಿಷ್ಟ 20 ಮಕ್ಕಳು ಪ್ರವೇಶ ಪಡೆಯುವಂತಿರಬೇಕು ಹಾಗೂ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸುವುದು. ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಸಜ್ಜುಗೊಳಿಸಬೇಕು.
ಎಸ್.ಡಿ.ಎಂ.ಸಿ ವತಿಯಿಂದ ತಾತ್ಕಾಲಿಕವಾಗಿ 10 ತಿಂಗಳುಗಳ ಅವಧಿಗೆ ಪ್ರಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಸಂಭಾವನೆೆ ಮಾಸಿಕ 7500 ರೂ. ಮತ್ತು ಅಯಾ ಅವರಿಗೆ ಮಾಸಿಕ 5001 ರೂ. ಸಂಭಾವನೆಯನ್ನು ನಿಗದಿಪಡಿಸಿರುವುದಾಗಿ ರಾಜ್ಯದ ಎಲ್ಲ ಡಿಸಿಪಿಐಗಳಿಗೆ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಲಾಗಿದೆ.