

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
ಬೀದರ್ ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆ.15 ರಂದು ಬೆಳಿಗ್ಗೆ 8.30 ರಿಂದ 9.30 ರವರೆಗೆ ರಾಜ್ಯದಾದ್ಯಂತ ಏಕ ಕಾಲಕ್ಕೆ ಆಚರಿಸಲಾಗುತ್ತಿದೆ. 2500 ಕಿಲೋ ಮೀಟರ್ ನ ಉದ್ದ ಮಾನವ ಸರಪಳಿಯ ನಿರ್ಮಾಣದಲ್ಲಿ 25 ಲಕ್ಷ ಜನರನ್ನು ಒಳಗೊಂಡ ಎಲ್ಲ ವರ್ಗದವರು ಭಾಗವಹಿಸಲಿದ್ದಾರೆ. ಇದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯ ಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೊಡಕು ಹೊಸಹಳ್ಳಿಯಿಂದ ಆರಂಭಗೊಂಡು ಕೋಲಾರ ಜಿಲ್ಲೆಯ ಗಡಿಯ ಭಾಗವಾದ ಎಚ್.ಕ್ರಾಸ್ ಸಮೀಪದ ಚಿಕ್ಕಗೊಂಡಹಳ್ಳಿಯವರೆಗೆ ಜಿಲ್ಲೆಯಲ್ಲಿ 47 ಕಿ.ಮೀ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ತಾಲೂಕು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ.ಕಾಸಿಂ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ ಮತ್ತಿತರರು ಇದ್ದರು.