ಬೆಂಗಳೂರು:
ಬೆಸ್ಕಾಂ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಪ್ರೀಪೇಯಿಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಯೋಜಿಸಲಾಗಿದ್ದು, ಮೊದಲ ಹಂತದಲ್ಲಿ ಹೊಸ ವಿದ್ಯುತ್ ಸಂಪರ್ಕ ಹೊಂದುವವರಿಗೆ ಮಾತ್ರ ಕಡ್ಡಾಯ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈಗಿರುವ ವಿದ್ಯುತ್ ಮೀಟರ್‌ಗಳ ಬದಲಿಗೆ, ಪ್ರೀಪೇಯಿಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುವ ಮೂಲಕ ವಿದ್ಯುತ್ ಬಿಲ್ ರೀಡಿಮಗ್ ಮಾಡುವುದನ್ನು ಮತ್ತು ವಿದ್ಯುತ್ ಬಿಲ್ ಕಟ್ಟುವುದನ್ನು ತಪ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಪೈಲೆಟ್ ಯೋಜನೆ ರೂಪಿಸಲಾಗಿತ್ತು. ಪೈಲೆಟ್ ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮೊದಲು ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಏನಿದು ಪ್ರೀಪೇಯಿಡ್ ಮೀಟರ್?
ಗೃಹ ಬಳಕೆಗೆ ಈಗ ಅಳವಡಿಕೆ ಆಗಿರುವುದು ಮೀಟರ್‌ಗಳಲ್ಲಿ, ಪ್ರತಿ ತಿಂಗಳು ಗ್ರಾಹಕರು ಬಳಕೆ ಮಾಡುವ ವಿದ್ಯುತ್ ಯುನಿಟ್‌ಗಳು ಎಷ್ಟು ಎನ್ನುವುದನ್ನು ಆದರಿಸಿ ಬಿಲ್ ಮಾಡಲಾಗುತ್ತಿದೆ. ಪ್ರತಿ ಮನೆ ಮನೆಗೂ ತೆರಳಿ ವಿದ್ಯುತ್ ರೀಡಿಂಗ್ ಮಾಡಿ ಬಿಲ್ ನೀಡಲಾಗುತ್ತಿದೆ. ಪ್ರೀಪೇಯಿಡ್ ಮೀಟರ್ ಜಾರಿಗೆ ಬಂದರೆ, ಮನೆ ಮನೆಗೆ ಹೋಗಿ ಮೀಟರ್ ರೀಡಿಂಗ್ ಮಾಡುವ ಅಗತ್ಯ ಇರುವುದಿಲ್ಲ. ಗ್ರಾಹಕರು ತಾವು ಮೊದಲೇ ರೀಚಾರ್ಜ ಮಾಡಿಸಿಕೊಂಡರೆ (ಮೊಬೈಲ್ ಕರೆನ್ಸಿ ರೀಚಾರ್ಜ್ ರೀತಿ) ಅವರು ಬಳಕೆ ಮಾಡುವಷ್ಟು ವಿದ್ಯುತ್ ಯುನಿಟ್ ಹಣ ಅದರಲ್ಲಿಯೇ ಕಟ್ ಆಗುತ್ತದೆ. ಬ್ಯಾಲೆನ್ಸ್ ಕಡಿಮೆಯಾದಾಗ ಮತ್ತೆ ರೀಚಾರ್ಜ್ ಮಾಡಿಕೊಳ್ಳಬಹುದು.
ಏನೇನು ಅನುಕೂಲ:
ಪ್ರೀಪೇಯಿಡ್ ವಿದ್ಯುತ್ ಮೀಟರ್ ಜಾರಿಗೆ ತರುವ ಮೂಲಕ ರೀಡಿಂಗ್‌ಗಾಗಿ ಮನೆ ಮನೆಗೆ ಹೋಗುವುದನ್ನು ತಪ್ಪಿಸಬಹುದು. ಆ ಮೂಲಕ ಮಾನವ ಸಂಪನ್ಮೂಲವನ್ನು ಉಳಿಕೆ ಮಾಡಬಹುದು. ಜೊತೆಗೆ ಸಂಬಳ ಸಾರಿಗೆ ವಗೈರೆ ಸೇರಿದಂತೆ ಆಡಳಿತಾತ್ಮಕ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ತಪ್ಪಿಸಬಹುದು ಎನ್ನುವುದು ಬೆಸ್ಕಾಂ ಉದ್ದೇಶ.
ಸದ್ಯ ಎಲ್ಲೆಲ್ಲಿ ಜಾರಿ?
ಪ್ರೀಪೇಯಿಡ್ ಮೀಟರ್‌ಗಳನ್ನು ಹೊಸದಾಗಿ ಮನೆ, ಕಾಂಪ್ಲೆಕ್ಸ್ ಅಥವಾ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ಮಾಡಲು ತಾತ್ಕಾಲಿಕವಾಗಿವಿದ್ಯುತ್ ಸಂಪರ್ಕ ಪಡೆಯುವವರಿಗೆ ಪ್ರೀಪೇಯಿಡ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಈಗಾಗಲೇ ವಿದ್ಯುತ್ ಸಂಪರ್ಕ ಹೊಂದಿದವರನನ್ನು ಹೊರತುಪಡಿಸಿ, ಹೊಸದಾಗಿ ಸಂಪರ್ಕ ಪಡೆದುಕೊಳ್ಳುವವರಿಗೂ ಈ ಪ್ರೀಪೇಯಿಡ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಇನ್ನುಳಿದಂತೆ ಗ್ರಾಹಕರು ಬಯಸಿ ತಮ್ಮಲ್ಲಿರುವ ಪೋಸ್ಟ್ ಪೇಯಿಡ್ ಮೀಟರ್ ಬದಲಿಸಿಕೊಳ್ಳಲು ಮುಂದಾದರೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಸದ್ಯಕ್ಕಿಲ್ಲ ಹಾಲಿ ಮೀಟರ್ ಬದಲಾವಣೆ:
ಈಗಿರುವ ವಿದ್ಯುತ್ ಮೀಟರ್ ಬದಲಿಸಿ ಪ್ರೀಪೇಯಿಡ್ ಮೀಟರ್ ಅಳವಡಿಸಲು ಮುಂದಾಗಿದ್ದಕ್ಕೆ ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲರಿಗೂ ಇದರ ಅಳವಡಿಕೆ ಕಡ್ಡಾಯ ಮಾಡುವುದನ್ನು ಕೈಬಿಡಲಾಗಿದೆ. ಹಂತ ಹಂತವಾಗಿ ಪ್ರೀಪೇಯಿಡ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಬೆಸ್ಕಾಂ ಮೂಲಗಳು ಖಚಿತಪಡಿಸಿವೆ.
*ತಾತ್ಕಾಲಿಕ ಮತ್ತು ಹೊಸ ವಿದ್ಯುತ್ ಸಂಪರ್ಕ ಪಡೆಯುವವರು ಮಾತ್ರ ಪ್ರೀಪೇಯಿಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಿಕೊಳ್ಳಬೇಕು. ಈಗಾಗಲೇ ಅಳವಡಿಸಿರುವ ವಿದ್ಯುತ್ ಮೀಟರ್ ಬದಲಿಸಿ ಸ್ಮಾರ್ಟ್ ಮೀಟರ್ ಅಳವಡಿಸುವ ಉದ್ದೇಶ ಸದ್ಯಕ್ಕೆ ಇಲ್ಲ. -ಮಹಾಂತೇಶ ಬೀಳಗಿ, ಬೆಸ್ಕಾಂ ಎಂಡಿ.