

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ, ರಾಜ್ಯದ ಗಮನ ಸೆಳೆಯುವ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಪದ್ಮನಾಭ ನಗರ ಕೂಡ ಒಂದು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಆರ್.ಅಶೋಕ್ ಈ ಕ್ಷೇತ್ರದ ಹಾಲಿ ಅಧಿಪತಿ. ಜೆಡಿಎಸ್ನ ‘ಹೆಡ್ಕ್ವಾರ್ಟರ್’ ಎಂಬ ಕಾರಣಕ್ಕೂ ಈ ಕ್ಷೇತ್ರ ಗಮನ ಸೆಳೆಯುತ್ತಿದೆ. ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು, ಕೈಗೊಳ್ಳುವ ತೀರ್ವನಗಳು ರಾಜ್ಯವಷ್ಟೇ ಅಲ್ಲ, ರಾಷ್ಟ್ರದ ಗಮನವನ್ನೂ ಸೆಳೆದಿದ್ದಿದೆ. ಅಚ್ಚರಿ ಎಂದರೆ, ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಜೆಡಿಎಸ್ಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಕೂಡ ಚುನಾವಣೆಗೆ ಮುಂಚೆಯೇ ಸೋಲೊಪ್ಪಿಕೊಳ್ಳುವ ಪರಂಪರೆ ನಡೆದೇ ಇದೆ. ಇದೇ ಕಾರಣಕ್ಕೆ, 2008, 2013 ಮತ್ತು 2018ರಲ್ಲಿ ಆರ್.ಅಶೋಕ್ ಏಕಮೇವ ಅದ್ವಿತೀಯ ಎನಿಸಿಕೊಂಡಿದ್ದಾರೆ.
ಈ ಬಾರಿ ಚುನಾವಣಾ ಕಣ ಸದ್ಯದ ಮಟ್ಟಿಗಂತೂ ಆರ್.ಅಶೋಕ್ ಹಿಡಿತ ತಪ್ಪಿದಂತೆ ಕಾಣಿಸುತ್ತಿಲ್ಲ. ಎದುರಾಳಿ ಯಾರೆಂದು ಅಲ್ಲಿನ ಜನರಿಗೂ ಗೊತ್ತಿಲ್ಲ. ಪಕ್ಷಗಳಿಗೂ ಸ್ಪಷ್ಟವಾಗಿಲ್ಲ. ಕ್ಷೇತ್ರದಲ್ಲಿನ ಎರಡು ಪ್ರಬಲ ಸಮುದಾಯಗಳನ್ನು ಅಶೋಕ್ ನೆಚ್ಚಿಕೊಂಡಿದ್ದು, ಅದನ್ನು ಚದುರಿಸುವ ತಂತ್ರಗಾರಿಕೆಗೆ ಜೆಡಿಎಸ್, ಕಾಂಗ್ರೆಸ್ ಚಿಂತನೆಯನ್ನಷ್ಟೇ ನಡೆಸಿವೆ. ಅದು ಕಾರ್ಯರೂಪಕ್ಕೆ ಬರಲು ಸಾಕಷ್ಟು ಸಮಯ ಬೇಕಾದೀತು. ಚುನಾವಣೆಗೆ ಇನ್ನು 3-4 ತಿಂಗಳಿದ್ದರೂ ಸಮರ್ಥ ನಾಯಕನ ಹುಡುಕಾಟದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿರುವುದು ಎದ್ದು ಕಾಣಿಸಿದೆ. ಈ ಬೆಳವಣಿಗೆ ಎದುರಾಳಿಯೇ ಇಲ್ಲದ ಚಕ್ರವ್ಯೂಹದಲ್ಲಿ ‘ಸಾಮ್ರಾಟ’ನ ಮೆರೆದಾಟದಂತೆ ಜನರಿಗೆ ಭಾಸವಾಗುತ್ತಿದೆ. ಹಾಗೆಯೇ ಎದುರಾಳಿಯ ಚಕ್ರವ್ಯೂಹವೂ ಎಲ್ಲ ಆಯಾಮದಲ್ಲಿ ದುರ್ಬಲಾತಿ ದುರ್ಬಲವೇ ಸರಿ.
ಕಾಂಗ್ರೆಸ್ ವಿಚಾರಕ್ಕೆ ಬಂದರೆ, ಗುರಪ್ಪ ನಾಯ್ಡು, ರಘುನಾಥ ನಾಯ್ಡು, ವೆಂಕಟೇಶ ಮೂರ್ತಿ, ಪ್ರಮೋದ್ ಕುಮಾರ್, ಸಂಜಯ್ ಗೌಡ ಟಿಕೆಟ್ಗೆ ಅರ್ಜಿ ಹಾಕಿದ್ದಾರೆ. ಇವರನ್ನು ಬಿಟ್ಟು ಅಚ್ಚರಿ ಅಭ್ಯರ್ಥಿ ಬರುವ ಸಾಧ್ಯತೆಯೂ ಹೆಚ್ಚಿದೆ. ಸರ್ವ ವಿಚಾರದಲ್ಲೂ ಗಟ್ಟಿಗರಾದ ಮತ್ತು ಜಾತಿ ಸಮೀಕರಣದಲ್ಲೂ ಪರಿಣಾಮ ಬೀರುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚು. ಇನ್ನು ಜೆಡಿಎಸ್ ಕೆಲವು ಹೆಸರನ್ನು ಪಟ್ಟಿ ಮಾಡಿ ಕೊಂಡಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಬದಲಿಸಿದರೆ, ಈ ಹಿಂದೆ ಕಾರ್ಪೆರೇಟರ್ಗಳಾಗಿದ್ದ ಹಿರಿಯ ಮುಖಂಡರಾದ ಎಲ್.ಶ್ರೀನಿವಾಸ್, ಬಸವರಾಜ್ ಹೆಸರು ಮುಂಚೂಣಿಯಲ್ಲಿವೆ. ಇವರನ್ನು ಬಿಟ್ಟು ಅಶೋಕ್ ಅವರ ವೈಯಕ್ತಿಕ ಆಯ್ಕೆಗೂ ಪ್ರಾತಿನಿಧ್ಯ ಸಿಗಬಹುದು. ಆಮ್ದಿ್ಮ ಪಕ್ಷ ಕೂಡ ಈ ಬಾರಿ ಕಣಕ್ಕಿಳಿಯುತ್ತಿದ್ದು, ಅಜಯ್ ಗೌಡ ಆಕಾಂಕ್ಷಿ.
ಕ್ಷೇತ್ರದ ಹೆಗ್ಗುರುತು: ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್, ಹೊಸಕೆರೆಹಳ್ಳಿ, ಚಿಕ್ಕಲಸಂದ್ರ, ಗೌಡರ ಪಾಳ್ಯ
ಮಹಾ ವಲಸೆ?: ಪಕ್ಷದ ಸೂಚನೆಯಂತೆ ಆರ್.ಅಶೋಕ್ ಬೇರೆ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬ ಚರ್ಚೆ ಕ್ಷೇತ್ರದ ತುಂಬೆಲ್ಲ ಇದೆ. ಕ್ಷೇತ್ರದಲ್ಲಿ ನಾಲ್ಕಾರು ಜನರನ್ನು ‘ವಿಜಯವಾಣಿ’ ಮಾತನಾಡಿಸಿದಾಗ, ಅಶೋಕ್ ಬೇರೆ ಕ್ಷೇತ್ರಕ್ಕೆ ಹೋಗುತ್ತಾರಂತೆ ಎಂಬ ಅಂತೆ ಕಂತೆ ಕತೆ ಹೇಳುತ್ತಾರೆ. ಕ್ಷೇತ್ರ ಬದಲಾದರೆ ಯಾರು ಕಣಕ್ಕಿಳಿಯುತ್ತಾರೆಂಬ ಕುತೂಹಲವೂ ಜನರಲ್ಲಿದೆ.
ಒಲವು-ನಲಿವು: ಕ್ಷೇತ್ರದಲ್ಲಿ ಯಾರೇ ಕಣಕ್ಕಿಳಿದರೂ ನಮ್ಮದು ಪಕ್ಷ ನಿಷ್ಠೆ ಎಂದು ಹೇಳುವವರು ಹಲವರಾದರೆ, ಹೊಸ ನೀರು ಬರಲಿ ಎಂದು ಹೇಳುವವರು ಕೆಲವರು. ಅಶೋಕ್ ಬಗ್ಗೆ ನಮ್ಮದೇನು ತಕರಾರು ಇಲ್ಲ, ಯಾರೋ ಹೊಸಬರನ್ನು ಆರಿಸುವ ಬದಲು ಈಗಿರುವವರೇ ಮುಂದುವರಿಯಲಿ ಎಂದು ಅಭಿಪ್ರಾಯ ನೀಡುವ ವರ್ಗವೂ ಇದೆ. ಕೆಲವು ವಿಚಾರದಲ್ಲಿ ಹಾಲಿ ಶಾಸಕ ಹಿಂಬಾಲಕರ ಪ್ರಾಬಲ್ಯ ಲಕ್ಷ್ಮಣ ರೇಖೆ ದಾಟಿದೆ ಎಂಬ ಅಸಮಾಧಾನವೂ ಕಿಡಿಯೊಡೆದಿದೆ. ಹಾಗೆಯೇ, ಭೂಗಳ್ಳರ ಬಗ್ಗೆ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆ ಇದೆ.
ಎಲೆಕ್ಷನ್ ಅಜೆಂಡಾ: ಕ್ಷೇತ್ರದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಪ್ರಯತ್ನ ಏನೇನೂ ಸಾಲದು. ಪ್ರಮುಖ ಕೆರೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಕಾಗಿಲ್ಲ. ಬಿಬಿಎಂಪಿ ಕಾಮಗಾರಿಗಳು ಕಳಪೆಯಾಗಿವೆ. ಕುಡಿಯುವ ನೀರಿನ ಸಮಸ್ಯೆಯೂ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಜನರ ಅಭಿಪ್ರಾಯ.