ಚುನಾವಣಾ ಪೂರ್ವ ಬಜೆಟ್‌ಗೆ ಮಹತ್ವವಿಲ್ಲ; ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

kumaraswamyjpg
Published on

ಚನ್ನಪಟ್ಟಣ: ಚುನಾವಣಾ ಪೂರ್ವದಲ್ಲಿ ಮಂಡನೆಯಾಗಿರುವ ಈ ಬಜೆಟ್‌ಗೆ ಯಾವುದೇ ಮಹತ್ವವಿಲ್ಲ. ಇದು ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಎಪಿಎಂಸಿ ಆವರಣದಲ್ಲಿ ನೂತನ ಗೋದಾಮು ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಏಪ್ರಿಲ್, ಮೇ ತಿಂಗಳಲ್ಲಿ ಸಂಬಳ ಕೊಡಲು ಈ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್‌ಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಮುಂದಿನ ಚುನಾವಣೆ ನಂತರ ಅಧಿಕಾರಕ್ಕೆ ಬರುವ ಸರ್ಕಾರ ಮಂಡಿಸುವ ಬಜೆಟ್ ಕಾರ್ಯರೂಪಕ್ಕೆ ಬರಲಿದೆ ಎಂದರು.

ಬಿಜೆಪಿ ಶಾಸಕರಲ್ಲೇ ಅಸಮಾಧಾನ: ಈಗಾಗಲೇ 70 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದು, ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 30ರಿಂದ 40 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವ ಲಕ್ಷಣಗಳಿಲ್ಲ. ಮುಂದೆ ಚುನಾವಣೆಗೆ ಜನರನ್ನು ಮೆಚ್ಚಿಸಲಾದರೂ ಜನಪ್ರಿಯ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆಯಿತ್ತು. ಅದೂ ಸುಳ್ಳಾಗಿದೆ. ಬಜೆಟ್ ಕುರಿತು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿಯ ಸಚಿವರು, ಶಾಸಕರಲ್ಲೇ ಅಸಮಾಧಾನವಿದೆ ಎಂಬ ಚರ್ಚೆ ವಿಧಾನಸೌಧದ ಮೊಗಶಾಲೆಯಲ್ಲಿ ನಡೆಯುತ್ತಿದೆ ಎಂಬ ಮಾಹಿತಿಯಿದೆ. ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಮಮಂದಿರ ನಾನೇ ಮಾಡಬೇಕು!: ರಾಮನಗರದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮತ ಸೆಳೆಯಲು ರಾಮಮಂದಿರ ಘೋಷಣೆ ಮಾಡಲಾಗಿದೆ. ಆದರೆ ಬಿಜೆಪಿಯಿಂದ ಅದು ಸಾಧ್ಯವಿಲ್ಲ. ಮೂರು ವರ್ಷಗಳ ಹಿಂದೆ ಮಂದಿರ ನಿರ್ಮಿಸಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಇನ್ನು ಒಂದು ತಿಂಗಳಲ್ಲೇ ಚುನಾವಣೆ ೋಷಣೆಯಾಗಲಿದ್ದು, ರಾಮಮಂದಿರ ೋಷಣೆ ಬಜೆಟ್ ಪುಸ್ತಕಕ್ಕೆ ಸೀಮಿತವಾಗಲಿದೆ. ಮುಂದೆ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದು ನನಗೆ ಗೊತ್ತಿದೆ. ರಾಮಮಂದಿರ ನನ್ನಿಂದಲೇ ನಿರ್ಮಾಣ ಮಾಡಲು ಸಾಧ್ಯ ಎಂದು ಅಧಿಕಾರ ಹಿಡಿಯುವ ಬಗ್ಗೆ ಭವಿಷ್ಯ ನುಡಿದರು.

ಡಿಸಿಸಿ ಬ್ಯಾಂಕ್ ಮುಚ್ಚಿ ಹೋಗುತ್ತಿತ್ತು: ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಒಂದು ವರ್ಷದಲ್ಲಿ ಹಣ ಕಟ್ಟದಿದ್ದರೆ ಅದಕ್ಕೆ ಬಡ್ಡಿ ಕಟ್ಟಬೇಕಲ್ಲವೇ? ರೈತರು ಸಾಲಗಾರರಾದಂತೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಕೇವಲ ಸಾಲ ಕೊಡುತ್ತೇವೆ ಅಂದರೆ ಆಗುತ್ತಾ? ಸಾಲ ಕೊಡೋದು ಸರ್ಕಾರವಲ್ಲ, ಡಿಸಿಸಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ಗಳು. ಅಂದು ಕುಮಾರಸ್ವಾಮಿ ಇಲ್ಲ ಅಂದಿದ್ದರೆ ಹಲವು ಕಡೆ ಡಿಸಿಸಿ ಬ್ಯಾಂಕ್‌ಗಳು ಮುಚ್ಚಿಹೋಗುತ್ತಿದ್ದವು. 25 ಸಾವಿರ ಕೋಟಿ ಸಾಲಮನ್ನಾ ಮಾಡಿ ಡಿಸಿಸಿ ಬ್ಯಾಂಕ್‌ಗೆ ಶಕ್ತಿ ನೀಡಿದ್ದೇನೆ. ಆದ್ದರಿಂದಲೇ ಈಗ ಬಿಜೆಪಿಯವರೂ ಸಾಲ ನೀಡುತ್ತೇನೆ ಎನ್ನುತ್ತಿದ್ದಾರೆ ಎಂದು ಕುಮಾರಸ್ವಾಮಿ ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net