ಗೌಡರ ಭದ್ರಕೋಟೆಯಲ್ಲಿ ನಿಖಿಲ್ ಅದೃಷ್ಟ ಪರೀಕ್ಷೆ: ಬಿಜೆಪಿ ಮತಗಳ ಮೇಲೆ ಜೆಡಿಎಸ್-ಕಾಂಗ್ರೆಸ್ ಗೆಲುವು ನಿರ್ಣಯ; ಎಚ್​ಡಿಕೆ ರಂಗಪ್ರವೇಶ ನಿರ್ಣಾಯಕ

Ramanagar
Published on

| ಗಂಗಾಧರ್ ಬೈರಾಪಟ್ಟಣ ರಾಮನಗರ

ರಾಮನಗರದಲ್ಲಿ ಈಗ ಧರ್ಮ ರಾಜಕಾರಣದ ಸದ್ದು. ಇದರ ನೆರಳಲ್ಲೇ ಚುನಾವಣೆ ಗೆಲ್ಲುವ ಹುಮ್ಮಸ್ಸು. ಕೊಡುವ ನಾಯಕರ ಕೈಯಿಂದ ಸಾಧ್ಯವಾದಷ್ಟು ಕಸಿದುಕೊಳ್ಳುವ ಆತುರದಲ್ಲಿರುವ ಕ್ಷೇತ್ರದ ಜನತೆ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದೇ ಗೌಪ್ಯ. ಮೇಲ್ನೋಟಕ್ಕೆ ರಾಮನಗರ ಜೆಡಿಎಸ್ ಪಾಲಿನ ಭದ್ರಕೋಟೆಯಂತೆ ಕಂಡರೂ, ಪಕ್ಷದ ನಾಯಕರ ಎಡವಟ್ಟಿನಿಂದಾಗಿಯೇ ಕೋಟೆ ಗೋಡೆಯಲ್ಲಿ ಸಾಕಷ್ಟು ಬಿರುಕು ಬಿಟ್ಟಿದೆ. ಇದರ ಲಾಭ ಪಡೆದುಕೊಳ್ಳುವ ಎಲ್ಲ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದ್ದು, ಚುನಾವಣೆಯಲ್ಲಿ ಬಿಜೆಪಿ ತೆಗೆದುಕೊಳ್ಳುವ ಮತಗಳ ಪ್ರಮಾಣ ಯಾರು ಗೆಲ್ಲಲಿದ್ದಾರೆ ಎನ್ನುವುದನ್ನು ನಿಶ್ಚಯಿಸಲಿದೆ.

ನಿಖಿಲ್​ಗೆ ಅಪ್ಪನ ಆಶೀರ್ವಾದ: ನಿರೀಕ್ಷಿತವಾದರೂ ಅನಿರೀಕ್ಷಿತ ಎನ್ನುವಂತೆ ನಿಖಿಲ್ ಕುಮಾರಸ್ವಾಮಿ ಹೆಸರು ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಂದಲೇ ಘೋಷಣೆ ಆಗಿದೆ. ನಿಖಿಲ್ ಗೆಲುವಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಶೀರ್ವಾದವೇ ಬಲ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ವಲಸೆ ಹೋದ ನಂತರ, ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಅನಿತಾ ಭರ್ಜರಿ ಯಶಸ್ಸು ಗಳಿಸಿದರು. ಆದರೆ, ಮೈತ್ರಿ ಮುರಿದ ನಂತರ ಕ್ಷೇತ್ರದ ಚಿತ್ರಣವೇ ಬದಲಾಗಿದ್ದು, ಜೆಡಿಎಸ್ ಪಾಲಿಗೆ ಗೆಲುವು ಅಷ್ಟು ಸುಲಭ ಅಲ್ಲ. ಸದ್ಯಕ್ಕೆ ನಿಖಿಲ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರಾದರೂ ಮತ್ತಷ್ಟು ಶ್ರಮ ಹಾಕಿದರಷ್ಟೇ ಹೋರಾಟ ಸಾಧ್ಯವಾಗಲಿದೆ. ಚುನಾವಣೆ ಹೊಸ್ತಿಲಲ್ಲಿ ಎಚ್​ಡಿಕೆ ರಂಗ ಪ್ರವೇಶ ಮಾಡುವುದರಿಂದ ಅಂತಿಮ ಹಂತದಲ್ಲಿ ನಿಖಿಲ್ ಬಲ ಹೆಚ್ಚಲಿದೆ.

ಗೆಲ್ಲುವ ಅದಮ್ಯ ವಿಶ್ವಾಸ: ಮತ್ತೊಂದೆಡೆ ಕಳೆದ ಬಾರಿ ಕುಮಾರಸ್ವಾಮಿ ವಿರುದ್ಧ ಗೆಲುವಿನ ಸನಿಹಕ್ಕೆ ಬಂದಿದ್ದ ಕಾಂಗ್ರೆಸ್ ಹುರಿಯಾಳು ಎಚ್.ಎ.ಇಕ್ಬಾಲ್ ಹುಸೇನ್, ಈ ಬಾರಿ ಹಣ ಮತ್ತು ಬೆವರು ಎರಡನ್ನೂ ಸಾಕಷ್ಟು ಹರಿಸಿದ್ದಾರೆ. ಸೋತ ನಂತರವೂ ಸುಮ್ಮನೆ ಕೂರದ ಇಕ್ಬಾಲ್ ಹುಸೇನ್, ಮನೆ ಮನೆಗೆ ತಲುಪುವ ಯತ್ನ ಮಾಡಿದ್ದಾರೆ. ಈ ಬಾರಿ ಮತ್ತಷ್ಟು ಚುರುಕು ಪಡೆದುಕೊಂಡಿರುವ ಇಕ್ಬಾಲ್ ಜೆಡಿಎಸ್​ಗೆ ಪೈಪೋಟಿ ನೀಡುವುದು ಮಾತ್ರವಲ್ಲ, ಗೆದ್ದೇ ಗೆಲ್ಲುತ್ತೇವೆ ಎನ್ನುವ ಅದಮ್ಯ ಉತ್ಸಾಹ ಪ್ರದರ್ಶನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಜೆಡಿಎಸ್ ಸ್ಥಳೀಯ ಮುಖಂಡರನ್ನು ಪಕ್ಷಕ್ಕೆ ಕರೆದುಕೊಳ್ಳುವ ಯತ್ನದಲ್ಲಿದ್ದು, ಇವರ ಕಾರ್ಯಕ್ಕೆ ಸಂಸದ ಡಿ.ಕೆ.ಸುರೇಶ್ ಬೆಂಬಲವಾಗಿ ನಿಂತಿರುವುದು ಕಣ ರಂಗೇರುವಂತೆ ಮಾಡಿದೆ.

ಕುಮಾರಸ್ವಾಮಿಗೆ ಪ್ರತಿಷ್ಠೆ: ರಾಮನಗರದಲ್ಲಿ ಈ ಬಾರಿ ನಿಖಿಲ್ ಸ್ಪರ್ಧೆ ಮಾಡುತ್ತಿರುವುದು ಎಚ್.ಡಿ.ಕುಮಾರಸ್ವಾಮಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ ಆಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋಲು ಕಂಡಿದ್ದ ನಿಖಿಲ್​ಗೆ ಈ ಬಾರಿ ರಾಜಕೀಯ ಪುನರ್ಜನ್ಮ ನೀಡಲೇಬೇಕಿದೆ. ಆದರೆ ಮಂಡ್ಯದಲ್ಲಿ ಉಂಟಾಗಿದ್ದ ಪರಿಸ್ಥಿತಿಯೇ ರಾಮನಗರದಲ್ಲಿ ಇದೆ ಎಂದರೆ ತಪ್ಪಾಗಲಾದರು. ಇರುವ ಎಲ್ಲ ಸಂಕಷ್ಟಗಳನ್ನು ಎದುರಿಸಿ ಕುಮಾರಸ್ವಾಮಿ ಪುತ್ರನನ್ನು ರಾಜಕೀಯ ದಡ ಮುಟ್ಟಿಸಬೇಕಿದೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್-ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕುತೂಹಲ ಮೂಡುವಂತೆ ಮಾಡಿವೆ.

ಧರ್ಮ ರಾಜಕಾರಣ ಮೊರೆ: ಕ್ಷೇತ್ರದಲ್ಲಿ ಧರ್ಮ ರಾಜಕಾರಣ ಭರ್ಜರಿಯಾಗಿಯೇ ನಡೆದಿದೆ. ಮೊದಲಿಗೆ ಎಚ್​ಡಿಕೆ ಕುಟುಂಬ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸುವ ಮೂಲಕ ಧರ್ಮ ರಾಜಕಾರಣದ ದಾಳ ಉರುಳಿಸಿತು. ಇದಕ್ಕೆ ಪ್ರತಿದಾಳಿ ಹಾಕಿದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಮಮಂದಿರ ಕಟ್ಟುತ್ತೇವೆ ಎಂದು ಹೇಳಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದರು. ಇದಾದ ನಂತರ ನಿಖಿಲ್ ಧರ್ಮಯಾತ್ರೆ ಹೆಸರಲ್ಲಿ ಧರ್ಮಸ್ಥಳ ಯಾತ್ರೆ ಆರಂಭಿಸಿದರೆ, ಕಾಂಗ್ರೆಸ್ ಇದೇ ಹೆಜ್ಜೆ ಇಡುವ ಮೂಲಕ ಧರ್ಮ ರಾಜಕಾರಣಕ್ಕೆ ಧುಮುಕಿತು.

ಲೆಕ್ಕಾಚಾರಕ್ಕೆ ಬಿಜೆಪಿ!: ಕ್ಷೇತ್ರದ ಪಾಲಿಗೆ ಬಿಜೆಪಿ ನಗಣ್ಯ ಎನ್ನುವ ಸನ್ನಿವೇಶ ಇತ್ತು. ಆದರೆ ಈ ಬಾರಿ ಇದರ ಚಿತ್ರಣ ಬದಲಾಗಿದೆ. ಬಿಜೆಪಿ ಅಭ್ಯರ್ಥಿ ತೆಗೆದುಕೊಳ್ಳುವ ಮತಗಳು ಜೆಡಿಎಸ್-ಕಾಂಗ್ರೆಸ್ ಗೆಲುವು ನಿರ್ಣಯಿಸಲಿದೆ. ಗೌತಮ್ೌಡ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೂ ಇವರ ಓಡಾಟಕ್ಕೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಇನ್ನು ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಹೆಸರು ಮುಂಚೂಣಿಗೆ ಬಂದಿದ್ದರೂ ಈ ಆಟದಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ. ಡಾ. ಪುಣ್ಯವತಿ ಹೆಸರು ಬಹಳವಾಗಿ ಕೇಳಿ ಬರುತ್ತಿದ್ದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೂಚಿಸುವ ಹೆಸರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ.

ಒಕ್ಕಲಿಗ ಮತದಾರರೇ ಹೆಚ್ಚು: ನಿಖಿಲ್ ಸ್ಪರ್ಧೆಯಿಂದಾಗಿ ಈ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮಾತ್ರವಲ್ಲದೆ, ಕೆಆರ್​ಎಸ್, ಆಪ್ ಸೇರಿ ಇತರ ಪಕ್ಷಗಳೂ ಸ್ಪರ್ಧೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕ್ಷೇತ್ರದಲ್ಲಿ ಪ್ರಮುಖವಾಗಿ ಒಕ್ಕಲಿಗ ಮತದಾರರೇ ಹೆಚ್ಚಿದ್ದು, ಇವುಗಳಲ್ಲಿ ಹೆಚ್ಚಿನ ಪಾಲು ಜೆಡಿಎಸ್​ಗೆ ಹೋಗುತ್ತವೆ ಎನ್ನುವುದು ಹಿಂದಿನ ಲೆಕ್ಕಾಚಾರ. ಇದರ ಹೊರತಾಗಿಯೂ ಕಳೆದ ಎರಡು ಚುನಾವಣೆಗಳಿಂದ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದ್ದು, ಒಕ್ಕಲಿಗ ಮತದಾರರ ಜತೆಗೆ ಉಳಿದ ಸಮುದಾಯದ ಮತದಾರರ ಬುಟ್ಟಿಗೆ ಪಕ್ಷಗಳು ಕೈ ಹಾಕುವ ಕಸರತ್ತು ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net