ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಗೆ ಹೊಂದಿಕೊಂಡ ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಔರಾದ್ನಲ್ಲಿ ಬಿಜೆಪಿಯಿಂದ ಮತ್ತೆ ಪ್ರಭು ಚವ್ಹಾಣ್ ಸ್ಪರ್ಧಿಸಲಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಸತತ ಗೆದ್ದು ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆ ಮಾಡಿದ ಕೀರ್ತಿ ಚವ್ಹಾಣ್ ಅವರಿಗಿದೆ. ಚವ್ಹಾಣ್ಗೆ ಸಂಪುಟದಲ್ಲಿ ಪಶು ಸಂಗೋಪನೆ ಖಾತೆ ಸಿಕ್ಕಿದ್ದು, ಅಭಿವೃದ್ಧಿ ಕಾರ್ಯಗಳ ಬಲದ ಜತೆಗೆ ಜನರೊಂದಿಗೆ ಬೆರೆಯುವ ಸ್ವಭಾವ, ಸರಳ ವ್ಯಕ್ತಿತ್ವ, ನಾನಾ ಚಟುವಟಿಕೆ ಇವರ ಶಕ್ತಿ ಹೆಚ್ಚಿಸಿದೆ. ಪಕ್ಷದೊಳಗೆ ಒಂದು ಟೀಮ್ ಇವರ ವಿರುದ್ಧ ನಿರಂತರ ಸಕ್ರಿಯವಿದೆ. ಇದ್ಯಾವುದಕ್ಕೂ ಜಗ್ಗದ, ಬಗ್ಗದ ಚವ್ಹಾಣ್ ಸೆಡ್ಡು ಹೊಡೆದು ತಮ್ಮ ಪ್ರಭಾವ, ಪ್ರಾಬಲ್ಯ ಸಾಬೀತುಪಡಿಸಿ ನಾಲ್ಕನೇ ಬಾರಿ ವಿಧಾನಸಭೆಗೆ ಎಂಟ್ರಿ ಕೊಡಲು ರಣತಂತ್ರ ಹೆಣೆದಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಸ್ವಲ್ಪದರಲ್ಲೇ ಸೋತಿದ್ದ ವಿಜಯಕುಮಾರ ಕೌಡ್ಯಾಳ ಸೇರಿ ಅರ್ಧ ಡಜನ್ಗೂ ಅಧಿಕ ಆಕಾಂಕ್ಷಿಗಳು ಕಾಂಗ್ರೆಸ್ನಲ್ಲಿದ್ದಾರೆ. ಭೀಮಸೇನರಾವ ಸಿಂಧೆ, ಶಂಕರರಾವ ದೊಡ್ಡಿ, ಡಾ.ಲಕ್ಷ್ಮಣ ಸೋರಳ್ಳಿಕರ ಇತರರು ಟಿಕೆಟ್ಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.