

| ಮೃತ್ಯುಂಜಯ ಕಪಗಲ್ ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಟಿಎಂ ಲೇಔಟ್ ಕೂಡಾ ಒಂದು. 2008ರಲ್ಲಿ ಈ ಕ್ಷೇತ್ರ ಉದಯವಾಗಿದ್ದರೂ ರಾಜಕೀಯ ನಕ್ಷೆಗಿಂತ ಪ್ರಾದೇಶಿಕ ಲಕ್ಷಣ, ಉದ್ಯಮ-ವಹಿವಾಟು ಗ್ರಾಫ್ನಿಂದ ಪ್ರತಿಷ್ಠೆ ಹೆಚ್ಚಿಸಿಕೊಂಡಿದೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆದ್ದು ಬೀಗಿದ್ದ ಕಾಂಗ್ರೆಸ್ನ ರಾಮಲಿಂಗಾರೆಡ್ಡಿ 2008ರಲ್ಲಿ ಕ್ಷೇತ್ರ ಬದಲಾಯಿಸಿದರು. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ 2008ರಲ್ಲಿ ಮರು ವಿಂಗಡಣೆಯಾಗಿ ತಲೆ ಎತ್ತಿದ ಬಿಟಿಎಂ ಲೇಔಟ್ನಲ್ಲೂ ರಾಮಲಿಂಗಾರೆಡ್ಡಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಅವ್ಯಕ್ತ ಆತಂಕ: ಪಕ್ಷದಮಟ್ಟಿಗೆ ವರ್ಚಸ್ವೀ ಹಿರಿಯ ಧುರೀಣರಲ್ಲಿ ಒಬ್ಬರಾದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡಿದ್ದಾರೆ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿ, ಜಾತಿ ಕೆಮಿಸ್ಟ್ರಿ, ಚುನಾವಣಾ ಪರಿಭಾಷೆಯು ಈ ಸರದಾರನಲ್ಲಿ ಅವ್ಯಕ್ತ ಆತಂಕ ಹುಟ್ಟುಹಾಕಿದೆ. ಹಿಂದಿನ ಚುನಾವಣೆಗಳ ಫಲಿತಾಂಶ, ಮತ ಗಳಿಕೆ ಪ್ರಮಾಣ ಸಮೀಕರಿಸಿದರೆ ಗೆಲುವಿನಲ್ಲಿ ವಿಶ್ವಾಸಪೂರ್ಣ, ಅದೃಷ್ಟದ ಪಾತ್ರ ಫಿಫ್ಟಿ ಇರುವುದು ಎದ್ದು ಕಾಣುತ್ತದೆ. ರಾಷ್ಟ್ರೀಯ ಪಕ್ಷಗಳೆರಡರ ಆಂತರಿಕ ವರದಿ ಪ್ರಕಾರ ‘ಅಡ್ಜಸ್ಟ್ಮೆಂಟ್ ರಾಜಕಾರಣ’ದ ಪಟ್ಟಿಯಲ್ಲಿ ಬಿಟಿಎಂ ಲೇಔಟ್ ಹೆಸರು ಸೇರಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಯಾವುದೇ ಹೊಂದಾಣಿಕೆಗೆ ಅವಕಾಶವಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರು ರವಾನಿಸಿದ್ದಾರೆ. ಇದು ಸಾಲದೆಂಬಂತೆ ಜನರಲ್ಲಿ ‘ಬದಲಾವಣೆ’ ಬಯಕೆ ಹುಟ್ಟಿಕೊಂಡಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಕೂದಲೆಳೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ 2008ರಲ್ಲಿ ಸೋತರು. ಪಕ್ಷದ ಸ್ವಯಂಕೃತ ತಪು್ಪಗಳು, ಹಿಂದಿನ ಎರಡು ಚುನಾವಣೆಗಳಲ್ಲಿ ತಡವಾಗಿ ಅಭ್ಯರ್ಥಿ ಘೋಷಣೆಯಿಂದ ಅನುಭವಿಸಿದ ನಷ್ಟದ ಬಗ್ಗೆ ಆಡಳಿತ ಬಿಜೆಪಿಗೆ ಅರಿವಾಗಿದ್ದರೆ, ಜೆಡಿಎಸ್, ಆಪ್ ಇನ್ನಿತರ ಪಕ್ಷಗಳು ಗಂಭೀರ ಪ್ರಯತ್ನಕ್ಕೆ ಕೈಹಾಕಿವೆ.
ಬಿಜೆಪಿಯಲ್ಲಿ ಆಕಾಂಕ್ಷಿಗಳ ಪೈಪೋಟಿ: ಆಡಳಿತ ಬಿಜೆಪಿಯಲ್ಲಿ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ಸೋತ ಲಲ್ಲೇಶ್ರೆಡ್ಡಿ, ಮುಖಂಡರಾದ ಶ್ರೀಧರರೆಡ್ಡಿ, ಅನಿಲ್ಶೆಟ್ಟಿ ಟಿಕೆಟ್ ಖಾತ್ರಿಗೆ ತೆರೆಮರೆ ಪ್ರಯತ್ನ ನಡೆಸಿದ್ದಾರೆ. ಅನಿಲ್ ಶೆಟ್ಟಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿದ್ದು ಗಮನಾರ್ಹ ಸಂಗತಿ. ದೆಹಲಿ ನಾಯಕರ ಸಂಪರ್ಕದಲ್ಲೂ ಇದ್ದು, ಅಷ್ಟೇ ಅಲ್ಲದೆ, ಕ್ಷೇತ್ರದ ಜನರ ಜತೆಗೆ ನಿಕಟತೆ ಸಾಧಿಸುವ ಕಸರತ್ತು ನಡೆಸಿದ್ದಾರೆ.
ಹಲವು ವೈಶಿಷ್ಟ್ಯಗಳ ಕ್ಷೇತ್ರ: ರಾಜೇಂದ್ರನಗರ, ಬೋವಿಕಾಲನಿ ಸೇರಿ ನಾಲ್ಕು ದೊಡ್ಡ, ಮೂರು ಚಿಕ್ಕ ಕೊಳಚೆ ಪ್ರದೇಶಗಳಿವೆ. ಕೋರಮಂಗಲ, ಬಿಟಿಎಂ ಲೇಔಟ್, ಫೋರಂ ಮಾಲ್ ಮುಂತಾದ ವಾಣಿಜ್ಯ ತಾಣಗಳಿವೆ. ಮೈಕೋ ಕಂಪನಿ, ಬೆಂಗಳೂರು ಡೇರಿ, ಭಾಗಶಃ ನಿಮ್ಹಾನ್ಸ್, ಕಲ್ಲಸಂದ್ರ, ಆಡುಗೋಡಿ, ಈಜಿಪುರ, ಮಡಿವಾಳ, ಸುದ್ದಗುಂಟೆಪಾಳ್ಯ, ಜಕ್ಕಸಂದ್ರ ಸಹಿತ ಎಂಟು ವಾರ್ಡ್ಗಳಿವೆ. 2.63 ಲಕ್ಷ ಮತದಾರರಿದ್ದು, ಉತ್ತರಭಾರತದ ರಾಜ್ಯಗಳು, ಕೇರಳದ ವಲಸಿಗರು ಹೆಚ್ಚು. ಒಕ್ಕಲಿಗರು, ಬ್ರಾಹ್ಮಣರು, ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಗಳು ನಿರ್ಣಾಯಕವಾಗಿದ್ದು, ಮುಸ್ಲಿಂ ಇನ್ನಿತರರ ಮತಗಳೂ ಇವೆ.