ಪ್ರಯಾಗ್‌ರಾಜ್​​​​ನಲ್ಲಿ ವಿದ್ಯಾರ್ಥಿ ಹತ್ಯೆ ಪ್ರಕರಣ: ಎಸ್‌ಎಚ್‌ಒ ಅಮಾನತು, ಐವರ ಬಂಧನ

prayagraj
Published on

ಪ್ರಯಾಗ್‌ರಾಜ್‌: ಸೋಮವಾರ ಪ್ರಯಾಗ್‌ರಾಜ್‌ನ ಖೇರಿ ಪ್ರದೇಶದಲ್ಲಿ ತನ್ನ ಸಹೋದರಿಗೆ ನೀಡಿದ ಕಿರುಕುಳವನ್ನು ವಿರೋಧಿಸಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬನನ್ನು ಹೊಡೆದು ಕೊಂದ ನಂತರ, ಆ ಪ್ರದೇಶದ ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿರ್ದಿಷ್ಟ ಸಮುದಾಯದ ಯುವಕರ ಮೇಲೆ ಕೊಲೆ ಆರೋಪವಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಜನರು ರಸ್ತೆಗೆ ಬಂದು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರಯಾಗ್‌ರಾಜ್‌ನಿಂದ 50 ಕಿ.ಮೀ ದೂರದಲ್ಲಿರುವ ಖೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಪುರ ದತ್ತು ಗ್ರಾಮದ ನಿವಾಸಿಯಾಗಿರುವ ವಿದ್ಯಾರ್ಥಿ ಪರ್ಮಾನಂದ ಇಂಟರ್ ಕಾಲೇಜ್ ಖೇರಿಯಲ್ಲಿ 10 ನೇ ತರಗತಿ ಓದುತ್ತಿದ್ದನು. ಸೋಮವಾರ, ತನ್ನ ಸಹೋದರಿಗೆ ಕಿರುಕುಳ ನೀಡುವ ಬಗ್ಗೆ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿದ್ದನು. ನಂತರ ಅವನು ತನ್ನ ಸಹೋದರಿಯೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಅವರು ಸಹೋದರಿಗೆ ಮತ್ತೆ ಕಿರುಕುಳ ನೀಡಲು ಪ್ರಯತ್ನಿಸಿದರು. ಇದನ್ನು ವಿರೋಧಿಸಿದಾಗ ಆತನನ್ನು ಕ್ರೂರವಾಗಿ ಥಳಿಸಿ, ಹಲ್ಲೆ ನಡೆಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ತಿಳಿದ ಸಂಬಂಧಿಕರು ಸ್ಥಳಕ್ಕಾಗಮಿಸಿ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ಆತ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಖೇರಿ ರಸ್ತೆ ತಡೆದು ವಾಹನ ಸಂಚಾರ ಸ್ಥಗಿತಗೊಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ರಸ್ತೆಯಲ್ಲಿ ಧರಣಿ ಕುಳಿತರು. ತಡರಾತ್ರಿ ಕಮಿಷನರ್ ರಮಿತ್ ಶರ್ಮಾ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಜನರನ್ನು ಸಮಾಧಾನಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net