

ಚನ್ನರಾಯಪಟ್ಟಣ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ನವೋದಯ ವಿದ್ಯಾಸಂಸ್ಥೆ ಸಹಯೋಗದಲ್ಲಿ ಮಂಗಳವಾರ ನವೋದಯ ವಿದ್ಯಾ ಸಂಸ್ಥೆಯಲ್ಲಿ ಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಅವರ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು ಎಂದರು.
ಗ್ರಾಮೀಣ ಮಕ್ಕಳು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು. ಕೀಳರಿಮೆ ಬಿಟ್ಟು ತಮ್ಮಲ್ಲಿನ ಪ್ರತಿಭೆಯನ್ನು ಇತರ ಮಕ್ಕಳ ಎದುರು ಪ್ರದರ್ಶಿಸಿ ಮೆಚ್ಚಿಗೆಗೆ ಪಾತ್ರರಾಗಬೇಕು ಎಂದ ಅವರು, ಪ್ರತಿಭಾ ಪ್ರದರ್ಶನಕ್ಕೆ ಅಗತ್ಯ ವೇದಿಕೆಯನ್ನು ಶಿಕ್ಷಕರು ಕಲ್ಪಿಸಿಕೊಡಬೇಕು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಳ್ಳಿ ಮಂಜುನಾಥ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅನಿಲ್, ನವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಬಸವರಾಜು, ಪದಾಧಿಕಾರಿಗಳಾದ ಭೋಜರಾಜು, ಸಿ.ಎಸ್.ಸುರೇಶ್, ಜೆ.ಎಂ.ಕಿರಣ್, ಸಿ.ಟಿ.ವೇಣುಗೋಪಾಲ್, ನಂಜುಂಡ ಮೈಮ್, ಸಿ.ಎಸ್.ಆದಿಶೇಶ್ ಕುಮಾರ್, ರಮೇಶ್, ಎಚ್.ಎನ್.ನವೀನ್, ಕೆ.ಎಂ.ಪುಟ್ಟಸ್ವಾಮಿ, ಶಂಕರೇಗೌಡ, ಪ್ರಾಂಶುಪಾಲ ಕಾಂತರಾಜು ಇತರರಿದ್ದರು.