ಗೌರಿ ಲಂಕೇಶ್​ ಹತ್ಯೆ ಆರೋಪಿ ಜತೆಗೆ ಕಾಣಿಸಿಕೊಂಡ ಪ್ರತಾಪ್​ ಸಿಂಹ; ಗೋಡ್ಸೆ ಆರಾಧಕರ ಅಸಲಿ ಮುಖ ಇದು‌ ಎಂದು ಕಿಡಿಕಾರಿದ ಕಾಂಗ್ರೆಸ್​

Pratap Simha
Published on

ಮೈಸೂರು: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನವೀನ್​ನನ್ನು ಬಿಜೆಪಿಯ ಮಾಜಿ ಸಂಸದ ಪ್ರತಾಪ್​ ಸಿಂಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾಜಿ ಸಂಸದರ ಈ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಕಾಂಗ್ರೆಸ್​ ಶಾಸಕರು, ಸಚಿವರು ಸೇರಿದಂತೆ ಹಲವರು ಕಿಡಿಕಾರಿದ್ದಾರೆ.

ನವೀನ್​ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಬರೆದುಕೊಂಡಿರುವ ಮಾಜಿ ಸಂಸದ ಪ್ರತಾಪ್​ ಸಿಂಹ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗೆ ಜಾಮೀನಿನ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಸೋಶಿಯಲ್​ ಮೀಡಿಯಾ ಎಕ್ಸ್​ನಲ್ಲಿ ಬರೆದುಕೊಂಡಿರುವ ಸಚಿವ ದಿನೇಶ್​ ಗುಂಡೂರಾವ್​, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಮದ್ದೂರಿನ ನವೀನ್ ಕುಮಾರ್ ತನ್ನ ಗೆಳೆಯ ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಹೇಳಿಕೊಂಡಿದ್ದಾರೆ. ಗೋಡ್ಸೆ ಆರಾಧಕ ಬಿಜೆಪಿಯವರ ಅಸಲಿ ಮುಖವೇ ಇದು. ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ‌ ಎಂಬುವುದಕ್ಕೆ ಇದೊಂದು ನಿದರ್ಶನ.

ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್‌ರವರನ್ನು ನಿಷ್ಕಾರಣವಾಗಿ ಕೊಲೆಗೈದ ಆರೋಪಿಯ ಕೃತ್ಯವನ್ನು ಬಿಜೆಪಿಯ ಮಾಜಿ ಸಂಸದರು ಖಂಡಿಸುವ ಬದಲು, ಆ ಆರೋಪಿಯ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ಎಂದು ಆರೋಗ್ಯ ಸಚಿವ ದಿನೇಶ್​ ಗೂಂಡೂರಾವ್​ ಪ್ರಶ್ನಿಸಿದ್ದಾರೆ.

ಇತ್ತ ಪ್ರತಾಪ್​ ಸಿಂಹ ಅವರ ನಡೆಯನ್ನು ಖಂಡಿಸಿರುವ ನೆಟ್ಟಿಗರು ಕೊಲೆ ಪ್ರಕರಣದ ಆರೋಪಿಯನ್ನು ಮೆರೆಸೋದು ಯಾರನ್ನು ಮೆಚ್ಚಿಸೋಕೆ ಎಂದು ಪ್ರಶ್ನಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಹುಟ್ಟಿಸುವವರು. ಸಮಾಜದ ಸಾಮರಸ್ಯವನ್ನು ಹಾಳು ಮಾಡುವವರು. ತತ್ವ ವಿಚಾರಗಳನ್ನು ಮುಚ್ಚು ಹಾಕಲು ಪ್ರಯತ್ನಿಸುತ್ತಿರುವ ಅಂತವರಿಗೆ ತಾವು ಹೋಗಿ ಭೇಟಿಯಾಗೋದು ಎಷ್ಟರಮಟ್ಟಿಗೆ ನ್ಯಾಯ ಮತ್ತು ನಿಮ್ಮ ಮನಸಾಕ್ಷಿ ಒಪ್ಪುತ್ತಾ ಎಂದು ನೆಟ್ಟಿಗರು ಕಮೆಂಟ್​ ಮಾಡಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net