

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಮೇ.10 ರಂದು ನಡೆಯಲಿದ್ದು, ಮೇ.13 ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಬ್ಯುಸಿಯಾಗಿದ್ದಾರೆ. ಈ ನಡುವೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.
ವರುಣಾದಲ್ಲಿ ಒಂದು ಲಕ್ಷಮತದಲ್ಲಿ ಗೆಲ್ಲುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯಗೆ ಪುಕ್ಕಲತನ ಭಯ ಕಾಡುತ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ. ಸಿದ್ದರಾಮಯ್ಯರನ್ನ ನೋಡಿದ್ರೆ ನಗು ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಒಂದು ಲಕ್ಷ ಮತದಲ್ಲಿ ಗೆಲ್ಲುವ ವಿಶ್ವಾಸ ಇರೋ ಸಿದ್ದರಾಮಯ್ಯ 17 ವರ್ಷದ ಮೊಮ್ಮಗ, ಕುಟುಂಬದವರನ್ನ ಕರೆದುಕೊಂಡು ಪೂಜೆ ಪುನಸ್ಕಾರ ಮಾಡಿ ಸೆಂಟಿಮೆಂಟಲ್ ಆಗಿ ಮತ ಕೇಳುತ್ತಿದ್ದಾರೆ. ಭಯ ಮತ್ತು ಪುಕ್ಕಲತನಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಿಮಗೆ ಕುಟುಂಬ ರಾಜಕಾರಣದ ಬಗ್ಗೆಮಾತನಾಡುವ ನೈತಿಕತೆ ಇಲ್ಲ. ನಿಮ್ಮ ಮೊಮ್ಮಗನನ್ನ ಉತ್ತರಾಧಿಕರಿ ಅಂತ ಸಂದೇಶ ನೀಡುತ್ತಾ ಇದ್ದೀರಾ?. ಕಾಂಗ್ರೆಸ್ಗೆ ಹೋದ ಮೇಲೆ ನಿಮ್ಮಲ್ಲಿರುವ ನೈತಿಕತೆ ಸಿದ್ದಾಂತ ಸತ್ತೊಯ್ತಾ...? ನಾವು ಕಂಡ ಸಿದ್ದರಾಮಯ್ಯ ಜನರಿಗೆ ವೇದ ಬೋಧನೆ ಮಾಡ್ತಾ ಇದ್ದವರು. ಆ ಸಿದ್ದರಾಮಯ್ಯ ಎಲ್ಲಿ ಹೋದ್ರು?. ಕಾಂಗ್ರೆಸ್ಗೆ ಹೋದ ಮೇಲೆ ನಿಮ್ಮ ಸಿದ್ದಾಂತ, ನೈತಿಕತೆಯನ್ನ ಕಾಂಗ್ರೆಸ್ ಗೆ ಅಡವಿಟ್ಟರಾ...? ಎಂದು ಪ್ರಶ್ನಿಸುವ ಮೂಲಕವಾಗಿ ವಾಗ್ದಾಳಿ ಮಾಡಿದ್ದಾರೆ.
ಮೊಮ್ಮಗನನ್ನ ಕರೆದುಕೊಂಡು ಹೋಗಿ ಮತ ಕೇಳೋದನ್ನ ನೋಡಿದ್ರೆ ಸೋಲು ನಿಶ್ಚಿತ. ನೀವು ಸಿಎಂ ಆಗಿದಾಗಲೇ ಒಂದು ಲಕ್ಷ ಮತದಲ್ಲಿ ವರುಣಾದಲ್ಲಿ ಗೆಲ್ಲೋಕೆ ಆಗಲಿಲ್ಲ. ಆಗ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಿರಿ. ನಾವು ಪ್ರಬಲ ಅಭ್ಯರ್ಥಿ ಹಾಕುತ್ತಿದ್ದಾಗೇ ಮೊಮ್ಮಗ, ಕುಟುಂಬ ಹಾದಿಯಾಗಿ ಪ್ರಚಾರಕ್ಕೆ ಇಳಿಯುತ್ತಿದ್ದಿರ. ಕರ್ನಾಟಕ ಇತಿಹಾಸದಲ್ಲಿ ಯಾರಾದ್ರು ಒಂದು ಲಕ್ಷ ಮತದಲ್ಲಿ ಗೆದ್ದಿದ್ದರೆ ಹೇಳಿ. ಮುಖ್ಯಮಂತ್ರಿ ಆಗಿದ್ದಾಗಲೇ ಚಾಮುಂಡೇಶ್ವರಿ ೩೬ ಸಾವಿರ ಅಂತರದಿಂದ ಸೋತಿದ್ರಿ. ಮೇ 13 ಕ್ಕೆ ಚಾಮುಂಡೇಶ್ವರಿ ತಾಯಿ ತೀರ್ಪು ಕೊಡ್ತಾಳೆ. ಅಲ್ಲಿ ತನಕ ಆದರು ಬಡಾಯಿಕೊಚ್ಚಿ ಕೊಳ್ಳದೇ ಇರಿ ಎಂದು ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.