

ನವದೆಹಲಿ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಚುನಾವಣಾ ತಂತ್ರಗಾರ ಹಾಗೂ ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
'ತಾವು ಇನ್ನುಂದೆ ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ಹೇಳಿಕೊಡುವ ಕೆಲಸದಿಂದ ಹಿಂದೆ ಸರಿಯುವುದಾಗಿ'' ಪ್ರಶಾಂತ್ ಕಿಶೋರ್ ಭಾನುವಾರ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
'ನಾನು ಈಗ ಏನು ಮಾಡುತ್ತಿದ್ದೇನೋ ಅದನ್ನು ಇಲ್ಲಿಗೆ ನಿಲ್ಲಿಸುವುದು ಸೂಕ್ತ ಎನಿಸುತ್ತಿದೆ. ಇಲ್ಲಿಗೆ ಸಾಕು. ಮುಂದೆ ಜೀವನದಲ್ಲಿ ಬೇರೆ ಏನನ್ನಾದರೂ ಮಾಡುವ ಇರಾದೆ ಇದೆ. ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ನನಗೆ ಖುಷಿ ತರಿಸಿದೆ. ಇದು ಇಲ್ಲಿಗೆ ಸಾಕು. ಈ ಕೆಲಸದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಅಲ್ಲದೇ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಚುನಾವಣೆ ವಿಷಯದಲ್ಲಿ ತಪ್ಪಾಗಿ ನಡೆದುಕೊಂಡಿದೆ. ಎಲ್ಲ ರೀತಿಯ ಸಹಾಯವನ್ನು ಅದು ಬಿಜೆಪಿಗೆ ಮಾಡಿತ್ತು ಎಂದು ಕೂಡ ಕಿಶೋರ್ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಚುನಾವಣೆ ಮುಂಚೆ ಪ್ರಶಾಂತ್ ಕಿಶೋರ್ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಯ ಫಲಿತಾಂಶ ದಾಟುವುದಿಲ್ಲ. ಒಂದು ವೇಳೆ ದಾಟಿದರೇ ನಾನು ನನ್ನ ಕೆಲಸದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು. ಇದೀಗ ಅವರ ಭವಿಷ್ಯ ನಿಜವಾಗಿದ್ದು ಅವರು ಮಾಡಿದ್ದ ಟ್ವೀಟ್ ಟ್ರೆಂಡಿಂಗ್ ಆಗಿದೆ.