

ಪಟನಾ: ಬಿಹಾರದ ಸಂಯುಕ್ತ ಜನಾತದಳ ಪಕ್ಷ(ಜೆಡಿಯು)ದಲ್ಲಿ ಬುಧವಾರ ಭಾರೀ ಬದಲಾವಣೆ ನಡೆದಿದೆ. ಪಕ್ಷದ ಸಂಸ್ಥಾಪಕ ಹಾಗೂ ಸಿಎಂ ನಿತೀಶ್ ಕುಮಾರ್ ಅವರು ಪಕ್ಷದ ಉಪಾಧ್ಯಕ್ಷ ಹಾಗೂ ಚುನಾವಣಾ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ಎಂಬುವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಪ್ರಶಾಂತ ಕಿಶೋರ್ ಮಾತ್ರವಲ್ಲದೆ ಪಕ್ಷದ ಮತ್ತೊಬ್ಬ ನಾಯಕ ಪವನ್ ವರ್ಮಾ ಅವರನ್ನು ಪಕ್ಷದಿಂದ ಹೊರದೂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕಿಶೋರ್ ಆರಂಭದಿಂದಲೂ ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಯು ಮೈತ್ತಿಕೂಟ ಆಗಿರುವುದರಿಂದ ಸಿಎಂ ನಿತೀಶ್ ಕುಮಾರ್ ಅವರಿಗೆ ಕಿಶೋರ್ ಹೇಳಿಕೆ ಇರಿಸುಮುರಿಸು ಉಂಟಾಗಿತ್ತು. ಅಲ್ಲದೆ, ಕಿಶೋರ್ ಮತ್ತು ಬಿಜೆಪಿ ನಾಯಕರ ನಡುವೆ ಟ್ವೀಟ್ ವಾರ್ ಕೂಡ ನಡೆಯುತ್ತಿತ್ತು.
ಇನ್ನು ಪವನ್ ವರ್ಮಾ, ನಿತೀಶ್ ಕುಮಾರ್ ಅವರಿಗೆ ಬಹಿರಂಗವಾಗಿಯೇ ಪತ್ರ ಬರೆದು ಬಿಜೆಪಿ ಮತ್ತು ಸ್ವಪಕ್ಷವನ್ನು ಟೀಕಿಸಿದ್ದರು. ಇಂದು ಜೆಡಿಯು ಅಸಹಿಷ್ಣುತೆ ಆಗಿರುವುದು ದುಃಖಕರ ದಿನ. ಕಠಿಣವಾದ ಪ್ರಶ್ನೆಗಳನ್ನು ಕೇಳಿದಾಗ ಜೆಡಿಯು ತನ್ನ ಮುಖವನ್ನೇ ಕನ್ನಡಿಯಲ್ಲಿ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.
ಈ ಎಲ್ಲ ಬೆಳವಣಿಗೆಯ ನಡುವೆಯೇ ಕೆಲ ದಿನಗಳ ಹಿಂದೆ ಕಿಶೋರ್ ಮತ್ತು ಪವನ್ ವರ್ಮಾ ಉದ್ದೇಶಿಸಿ ಇಬ್ಬರು ಆರಾಮವಾಗಿ ಪಕ್ಷವನ್ನು ತ್ಯಜಿಸಬಹುದೆಂದು ಹೇಳಿದ್ದರು. ಇದೀಗ ನಿತೀಶ್ ಅವರೇ ಕಿಶೋರ್ ಮತ್ತು ವರ್ಮಾರನ್ನು ಪಕ್ಷದಿಂದ ಹೊರದೂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಿಶೋರ್, ಧನ್ಯವಾದಗಳು ನಿತೀಶ್ ಕುಮಾರ್. ಬಿಹಾರದ ಸಿಎಂ ಸ್ಥಾನವನ್ನು ಉಳಿಸಿಕೊಂಡಿದ್ದಕ್ಕೆ ನಿಮಗೆ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಅಂದಹಾಗೆ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಳಲ್ಲಿ ಪರಿಣಿತರಾಗಿದ್ದಾರೆ. 2015ರ ಬಿಹಾರ ಚುನಾವಣೆಯಲ್ಲಿ ಜೆಡಿಯು ಗೆಲುವಿನಲ್ಲಿ ಕಿಶೋರ್ ಪಾತ್ರ ಮಹತ್ವದ್ದು ಎಂದು ಅಂದಾಜಿಸಲಾಗಿದೆ. ಕಿಶೋರ್ 2018ರಿಂದ ಜೆಡಿಯುನ ಉಪಾಧ್ಯಕ್ಷರಾಗಿದ್ದರು. ಇಬ್ಬರ ನಡುವೆ ಒಳ್ಳೆಯ ಸಂಬಂಧವೂ ಇತ್ತು. ಆದರೆ, ಸಿಎಎ ವಿಚಾರದಲ್ಲಿನ ವಿಭಿನ್ನ ನಿಲುವು ಇಬ್ಬರ ನಡುವಿನ ಸಂಬಂಧ ಹಳಸುವಂತೆ ಮಾಡಿತು.
ಸಿಎಎ ಹಾಗೂ ಎನ್ಸಿಆರ್ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬರುವಂತೆ ಆಗಾಗ ನಿತೀಶ್ ಕುಮಾರ್ ಅವರನ್ನು ಕಿಶೋರ್ ಒತ್ತಾಯಿಸುತ್ತಿದ್ದರು. ಅಲ್ಲದೆ, ಸಿಎಎ ವಿರೋಧಿಸುವಂತೆ ಇತರೆ ಪಕ್ಷದ ನಾಯಕರ ಸಹಾಯವನ್ನು ಕಿಶೋರ್ ಕೋರುತ್ತಿದ್ದರು. ಈ ಎಲ್ಲ ಬೆಳವಣಿಗೆಯೇ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಕಾರಣವಾಗಿದೆ. (ಏಜೆನ್ಸೀಸ್)