

ಇತ್ತೀಚೆಗೆ ಒಬ್ಬ ಉದ್ಯೋಗಿ ಯೋಗ ತರಬೇತಿಗೆ ಪ್ರವೇಶಕ್ಕೆ ಮುನ್ನ ಹೇಳಿದ. ವಾರಕ್ಕೆ 50 ಗಂಟೆಗಳ ಕೆಲಸ ಮಾಡುವೆ. ಆರ್ಥಿಕವಾಗಿ ಲಾಭವೂ ಆಗಿದೆ. ಆದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿಕೆಯಾಗಿದೆ. ನೋಯುತ್ತಿರುವ ಕುತ್ತಿಗೆ, ಬೆನ್ನುನೋವು, ಕುಸಿದ ಭುಜಗಳು, ಬಿಗಿಯಾದ ಸೊಂಟ ಮತ್ತು ಮಾನಸಿಕ ಒತ್ತಡ ಜಾಸ್ತಿಯಾಗಿದೆ. ಕಂಪ್ಯೂಟರ್ ಬಳಕೆ, ದಿನವಿಡಿ ಫೋನ್ ಕರೆಗಳ ಸ್ವೀಕಾರ, ಮಾತು ಕತೆಯಿಂದ ಈ ರೀತಿಯಾಗಿದೆ. ಇದು ಹಲವರ ಸಮಸ್ಯೆ ಕೂಡ.
ಇದಕ್ಕೆ ಪರಿಹಾರವೇನು?: ನಮ್ಮ ಆಧುನಿಕ ಯುಗದಲ್ಲಿ ಕಳಪೆ ಭಂಗಿ ಹೆಚ್ಚು ಪ್ರಚಲಿತವಾಗುತ್ತಿದೆ. ಕಂಪ್ಯೂಟರ್ ಕೆಲಸ ಮಾಡುವಾಗ ನಾವು ಸಾಮಾನ್ಯವಾಗಿ ಕುಣಿಯುತ್ತಿರಲಿ ಅಥವಾ ಅನನುಕೂಲವಾದ ಕುರ್ಚಿ ಯಲ್ಲಿ ಕುಳಿತುಕೊಳ್ಳುತ್ತಿರಲಿ, ನಮ್ಮ ದೇಹವು ದೀರ್ಘಕಾಲದವರೆಗೆ ಎದೆಗೂಡು, ಬೆನ್ನುಮೂಳೆಯ ಸ್ಥಾನಗಳಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಕಾಲಾನಂತರ ಇದು ಬೆನ್ನುನೋವು, ಕುತ್ತಿಗೆ ನೋವು, ಭುಜದ ಬಿಗಿತ, ತಲೆನೋವು, ಉಸಿರಾಟದ ತೊಂದರೆಗಳು ಸೇರಿದಂತೆ ಹಲವಾರು ಅನಾರೋಗ್ಯಕರ ಪರಿಣಾಮಗಳಿಗೆ ಕಾರಣವಾಗಬಹುದು. ಕೆಲಸದಲ್ಲಿ ದ್ದಾಗ ಕಡಿಮೆ ಉತ್ಪಾದಕತೆಗೂ ಕಾರಣವಾಗಬಹುದು.
ಇದಕ್ಕೆಲ್ಲಾ ಪರಿಹಾರ ಯೋಗ. ಯೋಗದ ಜಮಖಾನಕ್ಕೆ ಹೆಜ್ಜೆ ಹಾಕುವ ಮೂಲಕ ದಿನದ ಒತ್ತಡವನ್ನು ನಿಯಂತ್ರಿಸಬಹುದು. ನಿತ್ಯ ಯೋಗದಿಂದ ಕೆಲಸದ ಒತ್ತಡ ನಿಯಂತ್ರಣಗೊಳ್ಳುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಯೋಗವು ಗಮನವನ್ನು ಸುಧಾರಿಸುತ್ತದೆ. ಮತ್ತು ಶಕ್ತಿಯನ್ನು ಸುಧಾರಿಸುತ್ತದೆ. ದೀರ್ಘಕಾಲದ ಆರೋಗ್ಯ ಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಯೋಗದಿಂದ ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಮತ್ತು ಖಿನ್ನತೆ ಸುಧಾರಣೆಯಾಗುತ್ತದೆ. ಕಾರ್ಪೋರೇಟ್ ಯೋಗ, ವ್ಯಾಯಾಮಗಳನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳುವುದರಿಂದ ಅದ್ಭುತಗಳನ್ನು ಮಾಡಬಹುದು. ಏಕೆಂದರೆ ಅವು ದೇಹದ ನೋವು, ಆಯಾಸ ಮತ್ತು ಉದ್ವೇಗವನ್ನು ನಿವಾರಿಸುತ್ತದೆ ಮತ್ತು ಒಟ್ಟಾರೆ ಸ್ನಾಯುವಿನ ಶಕ್ತಿ ಮತ್ತು ನಮ್ರತೆಯನ್ನು ಹೆಚ್ಚಿಸುತ್ತದೆ. ದಿನವಿಡೀ ನಿಮ್ಮನ್ನು ತಾಜಾ ಆಗಿ ಇರಿಸುತ್ತದೆ. ವ್ಯಾಯಾಮಗಳನ್ನು ಹೆಚ್ಚು ಸಮಯ ವ್ಯಯಿಸದೇ ದಿನವಿಡೀ ಕ್ಷಿಪ್ರವಾಗಿ ಮಾಡಬಹುದು. ದೀರ್ಘಾವಧಿಯಲ್ಲಿ ಅನಗತ್ಯ ಅಸ್ವಸ್ಥತೆಯಿಂದ ಅದು ನಿಮ್ಮನ್ನು ಉಳಿಸುತ್ತದೆ.
1. ಕುರ್ಚಿಯಲ್ಲಿ ಕುಳಿತಲ್ಲೆ ತೋಳುಗಳನ್ನು ತಲೆಯ ಮೇಲ್ಭಾಗಕ್ಕೆ ನೇರವಾಗಿ ಎತ್ತಿ ಕೈ ಬೆರಳುಗಳನ್ನು ಪರಸ್ಪರ ಹೆಣೆದುಕೊಂಡು ನಿಟ್ಟುಸಿರು ಬಿಡುವುದು. ಎರಡು ಸಲ ಹೀಗೆ ಮಾಡಬೇಕು. (ಕುತ್ತಿಗೆ ಮತ್ತು ಭುಜಗಳನ್ನು ತಿರುಗಿಸುವುದು.
2. ಕೈಗಳನ್ನು ಮಡಿಸಿ ಭುಜದ ಮೇಲೆ ಬೆರಳುಗಳನ್ನು ಇರಿಸಿ, ಮುಂದಕ್ಕೂ ಹಿಂದಕ್ಕೂ ಮೂರು ಬಾರಿ ಕೈ ತಿರುಗಿಸಿ.
3. ಅರ್ಧ ಅಥವಾ ಒಂದು ಗ್ಲಾಸ್ ನೀರನ್ನು ಚಹ, ಕಾಫಿ ಕುಡಿಯುವ ರೀತಿಯಲ್ಲಿ ನಿಧಾನವಾಗಿ ಸೇವಿಸಿ. ಕುಳಿತಲ್ಲೆ ಬೆನ್ನು, ಕುತ್ತಿಗೆ, ಶಿರಸ್ಸನ್ನು ನೇರಮಾಡಿ, ದೇಹ ಸಡಿಲ ಮಾಡಿಕೊಂಡು, ಮುಖದಲ್ಲಿ ಸೌಮ್ಯಭಾವ ತುಂಬಿಕೊಂಡು, ಕಣ್ಣುಗಳನ್ನು ಮೃದುವಾಗಿ ಮುಚ್ಚಿಕೊಂಡು ಸುಖ ಪ್ರಾಣಾಯಾಮವನ್ನು ಮೂರರಿಂದ ಆರು ಬಾರಿ ಮಾಡಿ. ಕುಳಿತಲ್ಲೇ ಬೆನ್ನು, ಕುತ್ತಿಗೆ, ಶಿರಸ್ಸು ನೇರ ಮಾಡಿಕೊಂಡು ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟವನ್ನು ಗಮನಿಸಿ. ಅನಂತರ ಎರಡೂ ಹಸ್ತಗಳನ್ನು ಉಜ್ಜಿ ಮುಚ್ಚಿದ ಕಣ್ಣುಗಳಿಗೆ ಸ್ಪರ್ಶಿಸಿ, ನಂತರ ತೆರೆದ ಕಣ್ಣುಗಳಿಂದ ಹಸ್ತವನ್ನು ನೋಡಿ.
ಈ ರೀತಿ ಪ್ರತಿ ಎರಡು ಗಂಟೆಗೊಮ್ಮೆ ಮಾಡುತ್ತಿದ್ದರೆ ವಿಶ್ರಾಂತಿ ದೊರೆತು ಕೆಲಸಗಳನ್ನು ಸುಸೂತ್ರವಾಗಿ ಮಾಡಲು ಸುಲಭವಾಗುತ್ತದೆ ಹಾಗೂ ಕೈ, ಭುಜ, ಕುತ್ತಿಗೆ ಸೆಳೆತ ಮಾಯವಾಗುತ್ತದೆ. ಕಚೇರಿ ಉದ್ಯೋಗಿಗಳು ದಿನಾಲೂ ಮನೆಯಲ್ಲಿ (ಬೆಳಿಗ್ಗೆ ಯಾ ಸಂಜೆ) ಅಭ್ಯಾಸ ಮಾಡಬಹುದಾದ ಯೋಗಗಳ ಸಂಕ್ಷಿಪ್ತ ಪಟ್ಟಿ. ಇಷ್ಟ ದೇವರ ಪ್ರಾರ್ಥನೆ. ಕುಳಿತುಕೊಂಡು ಸ್ವಲ್ಪ ಹೊತ್ತು ದೀರ್ಘ ಉಸಿರಾಟ (ಸುಖ ಪ್ರಾಣಾಯಾಮ) ಅಗತ್ಯವಿದ್ದಲ್ಲಿ ಕ್ರಿಯೆಗಳಾದ ಕಪಾಲಭಾತಿ, ತ್ರಾಟಕ. ಕುತ್ತಿಗೆ ಮತ್ತು ಭುಜಗಳನ್ನು ತಿರುಗಿಸುವುದು ಸರಳ ವ್ಯಾಯಾಮಗಳು, ಸೂರ್ಯ ನಮಸ್ಕಾರ, ತುಸು ವಿಶ್ರಾಂತಿ.
ಯೋಗಾಸನಗಳ ಪಟ್ಟಿ- ತಾಡಾಸನ. ವೃಕ್ಷಾಸನ. ಅರ್ಧಚಕ್ರಾಸನ, ಉತ್ತಾನಾಸನ ಯಾ ಪಾದಹಸ್ತಾಸನ, ತ್ರಿಕೋಣಾಸನ, ಬದ್ಧಕೋಣಾಸನ, ಪದ್ಮಾಸನ, ಪಶ್ಚಿಮೋತ್ಥಾನಾಸನ, ಪೂವೋತ್ಥಾನಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ವಕ್ರಾಸನ, ಸರ್ವಾಂಗಾಸನ, ಹಲಾಸನ, ಮಕರಾಸನ, ಭುಜಂಗಾಸನ, ಶವಾಸನ, ಸರಳ ಪ್ರಾಣಾಯಾಮ, ನಾಡಿಶುದ್ಧಿ ಪ್ರಾಣಾಯಾಮ ಇತ್ಯಾದಿ ಸರಳಧ್ಯಾನ ಮತ್ತು ಮುದ್ರೆಗಳು.
ವಿಶೇಷ ಸೂಚನೆ: ಯೋಗವನ್ನು ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ.