ಈಡಿಗ ಸಮಾಜ ಒಡೆಯುತ್ತಿದ್ದಾರೆ ಪ್ರಣವಾನಂದ

sreedhar hultikoppa
ಶ್ರೀಧರ್ ಹುಲ್ತಿಕೊಪ್ಪ, ಆರ್ಯ ಈಡಿಗರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ
Published on

ಶಿವಮೊಗ್ಗ: ಈಡಿಗ ಸಮಾಜದ ಪೀಠಾಧೀಶರೆಂದು ಶ್ರೀ ವಿಖ್ಯಾತನಂದ ಸ್ವಾಮೀಜಿ ಅವರನ್ನು ಒಪ್ಪಿಕೊಂಡಿದ್ದೇವೆ. ಶ್ರೀ ಪ್ರಣವಾನಂದ ಸ್ವಾಮೀಜಿ ನಮ್ಮ ಸಮಾಜದ ಪೀಠಾಧೀಶರಾಗಲು ಸಾಧ್ಯವೇ ಇಲ್ಲ. ಶ್ರೀ ಪ್ರಣವಾನಂದ ಸ್ವಾಮೀಜಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ ಹೇಳಿದರು.

ನಮ್ಮ ಸಮಾಜದ ಕೇಂದ್ರ ಸಂಘ ಶ್ರೀ ಪ್ರಣವಾನಂದ ಸ್ವಾಮೀಜಿ ವಿರುದ್ಧ ನಿರ್ಣಯ ಕೈಗೊಂಡಿದೆ. ಜಿಲ್ಲಾ ಸಂಘವೂ ಅದನ್ನು ಅನುಮೋದಿಸುತ್ತದೆ. ಸ್ವಯಂಘೋಷಿತ ಸ್ವಾಮೀಜಿಯಾಗಿರುವ ಪ್ರಣವಾನಂದರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಚಿವ ಮಧು ಬಂಗಾರಪ್ಪ ವಿರುದ್ಧ ಪ್ರಣಾವನಂದರು ಮಾಡಿರುವ ಆರೋಪ, ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಜಿಲ್ಲಾ ಸಂಘ ಬಲವಾಗಿ ಖಂಡಿಸುತ್ತದೆ. ಮಧು ಬಂಗಾರಪ್ಪ ಎಲ್ಲ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಈಡಿಗ ಸಮಾಜದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೇ ಸ್ವಂತ ವರ್ಚಸ್ಸು ಹೊಂದಿದ್ದಾರೆ. ಅಂತವರ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಪ್ರಣವಾನಂದ ಸ್ವಾಮೀಜಿ ಇಲ್ಲ ಸಲ್ಲದ ಮಾತನಾಡಿ ಈಡಿಗ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರು ಕೂಡಲೆ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಮಾಜದ ಪ್ರಮುಖರಾದ ಎಸ್.ವಿ. ರಾಮಚಂದ್ರ, ಮಹೇಂದ್ರ, ಕಾಗೋಡು ರಾಮಪ್ಪ, ಜಿ.ಡಿ.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net