

ಬೆಂಗಳೂರು: ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ತ್ವರಿತವಾಗಿ ಬಂಧಿಸಿ, ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ದಾವಣಗೆರೆಗೆ ಶನಿವಾರ ತೆರಳಬೇಕಾಗಿತ್ತು. ಪ್ರವಾಸವನ್ನು ಅರ್ಧ ತಾಸು ಮುಂದೂಡಿ, ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಜತೆಗೆ ಚರ್ಚಿಸಿ, ಪ್ರಕರಣದ ಈವರೆಗಿನ ಬೆಳವಣಿಗೆ ಮಾಹಿತಿ ಪಡೆದರು.
ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಲುಕ್‌ಔಟ್ ನೋಟಿಸ್ ಜಾರಿ ಜತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಸಹಿಸಲಾಗದು ಎಂದು ಸಿಎಂ ಖಡಕ್ ಎಚ್ಚರಿಕೆ ನೀಡಿದರು.
ಸೂಕ್ತ ಕ್ರಮಗಳೊಂದಿಗೆ ಬಂಧನಕ್ಕೆ ಪ್ರಯತ್ನಿಸುತ್ತಿದ್ದೇವೆ. ಸಿಬಿಐ ಬ್ಲೂಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆಗಳಿದ್ದು, ತನಿಖೆಗೆ ಇನ್ನಷ್ಟು ವೇಗ ಸಿಗಲಿದೆ. ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಬಂಧಿಸಿ ಕರೆ ತರುವುದಾಗಿ ಅಧಿಕಾರಿಗಳು ವಿವರಣೆ ನೀಡಿದರು.
ಇದೇ ಸಂದರ್ಭದಲ್ಲಿ ದೂರು ಸಂತ್ರಸ್ತೆಯರು ಹಾಗೂ ಉಳಿದ ಸಂತ್ರಸ್ತೆಯರ ರಕ್ಷಣೆ ಸೇರಿ ಒಟ್ಟಾರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸಿದ್ದರಾಮಯ್ಯ ಮಹತ್ವದ ಸಲಹೆಯಿತ್ತಿದ್ದಾರೆ.
ಎಸ್‌ಐಟಿ, ಉನ್ನತಾಧಿಕಾರಿಗಳ ಜತೆಗೆ ಚರ್ಚಿಸಿದ ನಂತರ ಸಿದ್ದರಾಮಯ್ಯ ಅವರು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಚುನಾವಣಾ ಪ್ರಚಾರಕ್ಕಾಗಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ತೆರಳಿದರು.