ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

highcourt
Published on

ಬೆಂಗಳೂರು: ಮನೆಗೆಲಸದಾಕೆ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂ.27 ಕ್ಕೆ ಮುಂದೂಡಿದೆ.

ಮಂಗಳವಾರ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಜೈಲು ಸೇರಿ ವರ್ಷವೇ ಕಳೆದಿದೆ. ಹೊಳೆನರಸೀಪುರ ಪ್ರಕರಣದಲ್ಲಿ ಈವರೆಗೂ ಸಾಕ್ಷ್ಯ ವಿಚಾರಣೆಯೇ ಆರಂಭವಾಗಿಲ್ಲ. ಇದರಿಂದಾಗಿ ಸದ್ಯಕ್ಕೆ ವಿಚಾರಣೆ ಮುಗಿಯುವ ಹಾಗೇ ಕಾಣಿಸುತ್ತಿಲ್ಲ. ಇದೆಲ್ಲವನ್ನೂ ಪರಿಗಣಿಸಿ ಅರ್ಜಿದಾರರಿಗೆ ಷರತ್ತು ಬದ್ಧ ಜಾಮೀನು ನೀಡುವಂತೆ ಮನವಿ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಪರ ವಕೀಲರು, ಒಂದು ಪ್ರಕರಣದಲ್ಲಿ ಸಾಕ್ಷ್ಯ ವಿಚಾರಣೆ ಅಂತಿಮ ಹಂತದಲ್ಲಿದೆ. ಇದರ ನಡುವೆ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಲು ಆರೋಪಿ ತಾಯಿ ನಿರಂತರ ಪ್ರಯತ್ನದಲ್ಲಿದ್ದಾರೆ. ಸಾಕ್ಷ್ಯ ವಿಚಾರಣೆ ಪ್ರಕ್ರಿಯೆ ವಿಳಂಬ ಮಾಡಲು ಆಕೆ ಯತ್ನಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಕೋರ್ಟ್ ಮುಂದೆ ವಾದ ಮಂಡಿಸುವ ಅರ್ಹತೆ ಅರ್ಜಿದಾರರಿಗಿಲ್ಲ ಎಂದು ವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಜೂ.27 ಕ್ಕೆ ಮುಂದೂಡಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net