ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ, ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರವು ವಿವಾದಕ್ಕೀಡಾಗಿತ್ತು. ಬಹುತೇಕ ಸಂಭಾವನೆ ಪಡೆದು ಸಿನಿಮಾಕ್ಕೆ ಪ್ರಜ್ವಲ್ ದೇವರಾಜ್ ಅಸಹಕಾರ ತೋರುತ್ತಿದ್ದಾರೆ ಎಂದು ಚಿತ್ರತಂಡ ಆರೋಪಿಸಿತ್ತು. ಆದರೆ, ಅದನ್ನು ನಟ ನಿರಾಕರಿಸಿದ್ದರು. ಕೆಲ ದಿನಗಳಿಂದ ಚಿತ್ರತಂಡ ಮತ್ತು ನಟನ ನಡುವೆ ಬಹಿರಂಗ ವಾಗ್ಯುದ್ಧ ಮುಂದುವರಿದಿತ್ತು. ಇದೀಗ ಪ್ರಜ್ವಲ್ ದೇವರಾಜ್ ಈ ವಿವಾದಕ್ಕೆ ಪೂರ್ಣ ವಿರಾಮ ಇಡಲು ಮುಂದಾಗಿದ್ದು, ದೀರ್ಘ ಪತ್ರವನ್ನು ಬರೆದಿದ್ದಾರೆ. ‘‘ಕರಾವಳಿ’ ಚಿತ್ರದ ಟ್ರೇಲರ್‌ಗೆ ನನ್ನ ಅನುಮತಿ ಇಲ್ಲದೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿತ್ತು. ಹಾಗೆಯೇ, ಸಂಭಾವನೆ ಬಾಕಿ ಇರುವುದರಿಂದಾಗಿ ಆ ಕಾರ್ಯಕ್ರಮಕ್ಕೆ ಹೋಗಿರಲಿಲ್ಲವಷ್ಟೆ. ಅದಲ್ಲದೇ ಮತ್ಯಾವು ಕಾರಣವಿಲ್ಲ. ಆದರೆ, ಸಿನಿಮಾದಲ್ಲಿನ ನನ್ನ ದೈಹಿಕ ರೂಪಾಂತರವೇ ಮೂಲ ಕಾರಣ ಎಂಬಂತೆ ನಿರ್ದೇಶಕ ಗುರುದತ್ ಹೇಳಿಕೆ ನೀಡಿದ್ದಾರೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನು ಟ್ರೇಲರ್ ರಿಲೀಸ್ ಆದ ಮರುದಿನ ಚಿತ್ರತಂಡವು ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ಬಾಕಿ ಸಂಭಾವನೆ ಪಾವತಿಸಿದೆ. ಹಾಗೆಯೇ, ಚಿತ್ರದ ಡಬ್ಬಿಂಗ್ ಮತ್ತು ಪ್ರಚಾರದಲ್ಲಿ ಭಾಗವಹಿಸುವುದು ಅಗತ್ಯವಿಲ್ಲ ಎಂದು ನಿರ್ಮಾಣ ಸಂಸ್ಥೆ ನನಗೆ ತಿಳಿಸಿದೆ. ಹಾಗಾಗಿ, ಮುಂದೆ ಪ್ರಚಾರದಲ್ಲಿ ಭಾಗವಹಿಸದಿದ್ದರೆ ಅದು ನನ್ನ ನಿರ್ಧಾರವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆದರೆ, ನನ್ನ ಧ್ವನಿ ಪಾತ್ರಕ್ಕೆ ಸೂಕ್ತವಲ್ಲ ಎಂಬ ಹೇಳಿಕೆ ನೀಡಿರುವುದು ಬೇಸರ ತರಿಸಿದೆ. ನನ್ನ ನಿಲುವಿಗೆ ನಾನು ಬದ್ಧನಾಗಿದ್ದು, ಈ ವಿವಾದಕ್ಕೆ ಇಲ್ಲಿಗೆ ಪೂರ್ಣವಿರಾಮ ಇಡಬೇಕು’ ಎಂದು ಮನವಿ ಮಾಡಿದ್ದಾರೆ. ಹಾಗೆಯೇ, ಅಂತಿಮವಾಗಿ ‘ವೈಯಕ್ತಿಕವಾಗಿ ಭಿನ್ನಾಭಿಪ್ರಾಯಗಳು ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂದು ಹೇಳಿದ್ದು, ಸಿನಿಮಾವನ್ನು ಥಿಯೇಟರ್‌ಗೆ ತೆರಳಿ ವೀಕ್ಷಿಸುವಂತೆ ವಿನಂತಿಸಿಕೊಂಡಿದ್ದಾರೆ. ಇನ್ನು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿದ್ದ ಪ್ರಜ್ವಲ್ ಅಭಿಮಾನಿಗಳ ವಿರುದ್ಧ ನಿರ್ದೇಶಕ ಗುರುದತ್ ಗಾಣಿಗ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.