ಪ್ರಜ್ವಲ್ ಪ್ರಕರಣ, ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ

BJP Congress
Published on

ಬೆಂಗಳೂರು: ಪ್ರಜ್ವಲ್ ರೇವಣ್ಣ 2 ಸಾವಿರಕ್ಕೂ ಹೆಚ್ಚು ಬಾರಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ನಮ್ಮ ಹೆಣ್ಣು ಮಕ್ಕಳ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಇಷ್ಟೊಂದು ಘೋರ ಘಟನೆ ನಡೆದಿದ್ದರೂ ಸಹ ಬಿಜೆಪಿಯ ಒಬ್ಬನೇ ಒಬ್ಬ ನಾಯಕನೂ ಬಾಯಿ ಬಿಟ್ಟಿಲ್ಲ ಎಂದು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಅಲಕಾ ಲಂಬಾ ಟೀಕಿಸಿದ್ದಾರೆ.

ಭಾನುವಾರ ಕಾಂಗ್ರೆಸ್ ನಾಯರು ಜಂಟಿ ಸುದ್ದಿಗೋಷ್ಠಿ ನಡೆಸಿ ಇದೇ ಪ್ರಕರಣ ಇಟ್ಟುಕೊಂಡು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದರು. ಈ ಪ್ರಯತ್ನ ಸೋಮವಾರವೂ ಮುಂದುವರಿಯಿತು. ಅಲಕಾ ಲಂಬಾ ಮಾತನಾಡಿ, ಮೋದಿ ಮಾತೆತ್ತಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಭಾಷಣದಲ್ಲಿ ಮಾತ್ರ ಕುಟುಂಬ ರಾಜಕಾರಣ ಮತ್ತು ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಾರೆ. ಪ್ರಜ್ವಲ್ ಪ್ರಕರಣ ಪ್ರಸ್ತಾಪಿಸುವುದಿಲ್ಲ ಎಂದು ಕುಟುಕಿದರು.

ಹಾಸನದ ಸಂಸದ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇದುವರೆಗೂ ನಡೆದ ಎಲ್ಲಾ ಮಹಿಳಾ ದೌರ್ಜನ್ಯಗಳ ದಾಖಲೆಗಳನ್ನು ಮುರಿದು ಹಾಕಿದ್ದಾರೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುತ್ತಲೇ ಇರುತ್ತಾರೆ. ಅವರ ಮಾತಿಗೆ ಏನಾದರೂ ಅರ್ಥವಿದೆಯೇ? ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅನೇಕ ಜನ ವಿದೇಶಕ್ಕೆ ಓಡಿ ಹೋಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ದೇಶಕ್ಕೆ ಮೋಸ ಮಾಡಿ ಹೋಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣನೂ ಸಹ ಅದೇ ಹಾದಿ ತುಳಿದಿದ್ದಾರೆ ಎಂದು ಟೀಕಿಸಿದರು.

ಅಧಿಕಾರದ ಮದದಿಂದ ಈ ಕೃತ್ಯಗಳು ನಡೆದಿದೆ. ತನ್ನ ಅಧಿಕಾರವನ್ನು ಬಳಸಿಕೊಂಡು ಬಡ, ಅಮಾಯಕ ಹೆಣ್ಣು ಮಕ್ಕಳ ಮಾನಹಾನಿಯಾಗಿದೆ. ಪ್ರಧಾನ ಮಂತ್ರಿಗಳೇ ಜತೆಗಿರುವಾಗ ಆತ ಏಕೆ ಭಯಪಡಬೇಕು. ಅದಕ್ಕೆ ಸಾವಿರಾರು ವಿಡಿಯೋಗಳನ್ನು ಮಾಡಿದ್ದಾನೆ. ಕಾನೂನಿನ ಭಯವಿಲ್ಲದೆ ಕೃತ್ಯ ಎಸಗಿದ್ದಾನೆ ಎಂದರು.

ಲೋಕಸಭಾ ಅಭ್ಯರ್ಥಿ ಸೌಮ್ಯರೆಡ್ಡಿ ಮಾತನಾಡಿ, ವಿಜಯೇಂದ್ರ ಅವರೇ ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿಲ್ಲವೇ?, ಶೋಭಕ್ಕ ಎಲ್ಲಿದ್ದೀರಿ? ಬಿಜೆಪಿ, ಜೆಡಿಎಸ್ ನಾಯಕರೇ ನಿಮಗೆ ಬಾಯಿ ಇಲ್ಲವೇ? ಸುಮಲತಾ ಅವರೇ ಏಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net