'ಡ್ಯೂಡ್​' ಹೊಸ ಚಿತ್ರಕ್ಕೆ ಸದ್ಯಕ್ಕಿಲ್ಲ ರಿಲೀಸ್​ ಭಾಗ್ಯ! ಮತ್ತೊಮ್ಮೆ ಪ್ರದೀಪ್ ರಂಗನಾಥನ್​​ ನಟನೆಯ 'LIK' ಮುಂದೂಡಿಕೆ?

LIK ಚಿತ್ರದ ಪೋಸ್ಟರ್​
LIK ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳು ನಟ ಪ್ರದೀಪ್ ರಂಗನಾಥನ್​ ಅಭಿನಯದ 4ನೇ ಚಿತ್ರವಿದು
  • ಪದೇ ಪದೇ ಚಿತ್ರದ ರಿಲೀಸ್​ ಮುಂದೂಡಿಕೆ
  • ಮುಖ್ಯಭೂಮಿಕೆಯಲ್ಲಿ ಪ್ರದೀಪ್ ಮತ್ತು ಕೃತಿ ಶೆಟ್ಟಿ
ತಮಿಳುನಾಡು: ತಮಿಳಿನ ಸೂಪರ್​ಹಿಟ್ 'ಲವ್​ ಟುಡೇ',​ ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ (Pradeep Ranganathan), ಅದೇ ಯುವಜನತೆ ಮುಂದೆ ತಾವು ಅಭಿನಯದ ಮತ್ತೊಂದು ಸಿನಿಮಾ ‘ಡ್ಯೂಡ್’ ಮೂಲಕ ಇತ್ತೀಚೆಗಷ್ಟೇ ಚಿತ್ರಮಂದಿರಕ್ಕೆ ಲಗ್ಗೆಯಿಟ್ಟರು. ಅ.17ರಂದು ಬಹುತೇಕ ಥಿಯೇಟರ್​ಗಳಲ್ಲಿ ತೆರೆಕಂಡ ಪ್ರದೀಪ್​ ಹೊಸ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಲಭಿಸಿದ್ದು, ​ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಲಯವನ್ನೇ ಕಂಡುಕೊಂಡಿತು. ಇದೀಗ ಮತ್ತೊಂದು ಪ್ರೇಮಕಥೆ ಮೂಲಕ ತೆರೆಗೆ ಬರಲು ಸಜ್ಜಾಗಿರುವ ಪ್ರದೀಪ್​ಗೆ ಸದ್ಯ ಸರಿಯಾದ ರಿಲೀಸ್​ ಭಾಗ್ಯ ಸಿಗುತ್ತಿಲ್ಲ.
ಸಾಧಾರಣ ಮೈಕಟ್ಟು, ಸಿಂಪಲ್​ ಲುಕ್​ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್​, ಕೇವಲ ಎರಡ್ಮೂರು ಚಿತ್ರಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಪ್ರದೀಪ್​ ನಟನೆಯ ನಾಲ್ಕನೇ ಬಹುನಿರೀಕ್ಷಿತ 'ಲವ್​ ಇನ್ಶೂರೆನ್ಸ್ ಕಂಪನಿ' (LIK) ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದೇ ಆದರೂ ಅಂದುಕೊಂಡ ಸಮಯಕ್ಕೆ ಚಿತ್ರವನ್ನು ಬಿಡುಗಡೆಗೊಳಿಸಲು ಸಾಧ್ಯವಾಗುತ್ತಿಲ್ಲ.

ಪದೇ ಪದೇ ಮುಂದೂಡಿಕೆ!

ಲೇಡಿ ಸೂಪರ್​ಸ್ಟಾರ್​ ನಯನತಾರ ಪತಿ ವಿಘ್ನೇಶ್ ಶಿವನ್​ ಈ ಚಿತ್ರದ ಕಥೆಯನ್ನು ಬರೆದು, ನಿರ್ದೇಶಿಸಿದ್ದಾರೆ. ಪ್ರದೀಪ್​ ರಂಗನಾಥನ್​ ಮತ್ತು ನಟಿ ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರವು ಈ ಮೊದಲು ಸೆ.18ಕ್ಕೆ ತೆರೆಕಾಣಲು ರೆಡಿಯಾಗಿತ್ತು. ಆದರೆ, ಆಗಲಿಲ್ಲ. ನಂತರದಲ್ಲಿ ಅ.17ಕ್ಕೆ ಮುಂದೋಯಿತು. ಅಂದುಕೊಂಡಂತೆ ಇದು ನಡೆಯಲಿಲ್ಲ. ಕೊನೆಗೆ ಡಿ.18ರಂದು ಬಿಡುಗಡೆ ಭಾಗ್ಯ ನೀಡುವ ಬಗ್ಗೆ ಚಿತ್ರತಂಡ ನಿರ್ಧರಿಸಿತು. ಆದರೀಗ, ಅದೂ ಕೂಡ ಮುಂದೂಡಿಕೆಯತ್ತ ಸಾಗಿದೆ.
ವರದಿಗಳ ಪ್ರಕಾರ, ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಅಂಡ್ ಆ್ಯಶ್' ಇದೇ ಡಿ.19ರಂದು ಜಾಗತಿಕವಾಗಿ ತೆರೆಕಾಣಲಿದೆ. ಇದರೊಟ್ಟಿಗೆ ಇತರೆ ಸಿನಿಮಾಗಳು ಕೂಡ ಡಿಸೆಂಬರ್​ನಲ್ಲಿ ರಿಲೀಸ್ ಆಗಲು ಸಾಲುಗಟ್ಟಿ ನಿಂತಿವೆ. ಈ ಎಲ್ಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನಿರ್ದೇಶಕರು, ಈ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ, ಚಿತ್ರವು ಮುಂದಿನ ವರ್ಷ ಫೆಬ್ರವರಿ 14, ಪ್ರೇಮಿಗಳ ದಿನದಂದು ರಿಲೀಸ್ ಆಗಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಏನು ಹೇಳಲಿದೆ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ.

ಹೀಗಿದೆ ತಾರಾಗಣ

'ಎಲ್​ಐಕೆ' ಚಿತ್ರದಲ್ಲಿ ಪ್ರದೀಪ್ ರಂಗನಾಥನ್​, ಕೃತಿ ಶೆಟ್ಟಿ, ಎಸ್.ಜೆ. ಸೂರ್ಯ, ಯೋಗಿ ಬಾಬು, ಗೌರಿ ಕಿಶನ್, ಸೀಮನ್, ಶಾರಾ, ಮೈಸ್ಕಿನ್, ಆನಂದ್ ರಾಜ್ ಮತ್ತು ಸುನಿಲ್ ರೆಡ್ಡಿ ಸೇರಿದಂತೆ ಪ್ರಮುಖರು ನಟಿಸಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ರೌಡಿ ಪಿಕ್ಚರ್ಸ್ ಹಾಗೂ ಎಸ್.ಎಸ್. ಲಲಿತ್ ಕುಮಾರ್ ಅವರ ಸೆವೆನ್ ಸ್ಕ್ರೀನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಿಸಲಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net