

ಶಿವಮೊಗ್ಗ: ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರವರ್ಧಿತ ಅಕ್ಕಿ ವಿತರಣೆಗೆ ರಾಜ್ಯದಲ್ಲೇ ಪ್ರಥಮ ಹಂತದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಎಫ್‌ಸಿಐ(ಭಾರತ ಆಹಾರ ನಿಗಮ)ನ ಶಿವಮೊಗ್ಗ ವಿಭಾಗೀಯ ವ್ಯವಸ್ಥಾಪಕ ಭಗವಾನ್ ಸಿಂಗ್ ತಿಳಿಸಿದರು.
ಆಹಾರದ ಜತೆಗೆ ಪೋಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರವನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆಗೆ ಕ್ರಮ ಕೈಗೊಂಡಿದೆ. 2024ರ ವೇಳೆಗೆ ಇಡೀ ದೇಶಾದ್ಯಂತ ಸಾರವರ್ಧಿತ ಅಕ್ಕಿ ಪೂರೈಕೆಗೆ ಗುರಿ ಹಾಕಿಕೊಂಡಿದೆ ಎಂದು ಆಲ್ಕೊಳ ಸಮೀಪದ ಎಫ್‌ಸಿಐ ವಿಭಾಗೀಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತುತ ಅತಿ ಹೆಚ್ಚು ಪೋಷಕಾಂಶ ಕೊರತೆ ಇರುವ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ಪೂರೈಕೆಯಾಗುತ್ತಿದೆ. ಕಳೆದ ಮೇ ತಿಂಗಳಿಂದಲೇ ಸಾರವರ್ಧಿತ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರಿಗೆ ವಿತರಿಸಲಾಗುತ್ತಿದೆ. ಯಾರೊಬ್ಬರೂ ಪೌಷ್ಟಿಕಾಂಶಯುಕ್ತ ಆಹಾರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಪಿಎಂಜಿಕೆವೈ ಯೋಜನೆ ಜಾರಿಗೊಳಿಸಿ ದುರ್ಬಲ ವರ್ಗದವರಿಗೆ ಉಚಿತವಾಗಿ ಪಡಿತರ ವಿತರಿಸುತ್ತಿದೆ ಎಂದರು.
ಬಹುತೇಕರಲ್ಲಿ ಪೋಷಕಾಂಶದ ಕೊರತೆ ಇರುವುದನ್ನು ಮನಗಂಡಿರುವ ಸರ್ಕಾರ ಸಾರವರ್ಧಿತ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮತ್ತು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು. ಶಿವಮೊಗ್ಗ ವಿಭಾಗೀಯ ಕಚೇರಿ ಗುಣಮಟ್ಟ ನಿಯಂತ್ರಣ ವಿಭಾಗದ ವ್ಯವಸ್ಥಾಪಕ ಶಿವಕುಮಾರ್, ಸೆಂಟ್ರಲ್ ಬ್ಯೂರೋ ಆಫ್ ಇನ್‌ಫಾರ್ಮೇಷನ್‌ನ ಫೀಲ್ಡ್ ಪಬ್ಲಿಸಿಟಿ ಆಫೀಸರ್ ಅಕ್ಷತಾ ಸುದ್ದಿಗೋಷ್ಠಿಯಲ್ಲಿದ್ದರು.