ಪ್ರಾಚೀನ ಜ್ಞಾನ; ಗೃಹಸ್ಥಾಶ್ರಮ ಜೀವನವೇ ಧನ್ಯ

Prachina jnana
Published on
ಹಿಂದುಧರ್ಮದಲ್ಲಿ ಕುಟುಂಬಪದ್ಧತಿ ಹಾಗೂ ದಾಂಪತ್ಯಜೀವನ ಅವಿಭಾಜ್ಯ ಅಂಗ. ಮದುವೆ ಬಾಂಧವ್ಯದ ಬೆಸುಗೆ. ಎರಡು ಕಣ್ಣಿದ್ದರೂ ಗೋಚರಿಸುವುದು ಒಂದೇ ದೃಷ್ಟಿ. ಎತ್ತಿನ ಗಾಡಿಗೆ ಎರಡು ಚಕ್ರವಿದ್ದರೂ ಗತಿ ಒಂದೇ. ಹಾಗೆಯೇ ವಿವಾಹವು ದೇಹ-ಮನಸ್ಸುಗಳ ಶಾಶ್ವತ ಸಂಬಂಧ. ಗೋತ್ರ-ವಂಶಾವಳಿಯ ಬೆಳವಣಿಗೆ. ಮದುವೆಯ ಸಂದರ್ಭದಲ್ಲಿ ದಂಪತಿಗಳನ್ನು ಲಕ್ಷ್ಮೀ- ನಾರಾಯಣ, ಉಮಾ-ಮಹೇಶ್ವರ ಎಂದು ದೈವೀಸ್ವರೂಪದಿಂದ ಪೂಜಿಸುವರು. ದಾಂಪತ್ಯಜೀವನವು ನಂಬಿಕೆ-ವಿಶ್ವಾಸ-ತ್ಯಾಗಗಳಿಂದ ಭದ್ರವಾಗುತ್ತದೆ.

ಸಾನಂದಂ ಸದನಂ

ಸುತಾಶ್ಚ ಸುಧಿಯಃ

ಕಾಂತಾ ನ ದುರ್ಭಾಷಿಣೀ

ಸನ್ಮಿತ್ರಂ ಸುಧನಂ ಸ್ವಯೋಷಿತಿ ರತಿಃ ಚಾಜ್ಞಾಪರಾಃ ಸೇವಕಾಃ |

ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ

ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||

(ಸಂತೋಷ ತುಂಬಿದ ಮನೆ, ಬುದ್ಧಿವಂತ ಮಕ್ಕಳು, ಕೆಡುನುಡಿಗಳನ್ನಾಡದ ಪತ್ನಿ, ಹಿತೈಷಿಗಳಾದ ಸ್ನೇಹಿತರು, ಧರ್ಮಮಾರ್ಗದಲ್ಲಿ ಗಳಿಸಿದ ಧನ, ತನ್ನ ಪತ್ನಿಯೊಂದಿಗೆ ಮಾತ್ರ ಪೀತಿ, ಆಜ್ಞೆಯನ್ನು ಪಾಲಿಸುವ ಆಳುಗಳು, ಅತಿಥಿ ಸತ್ಕಾರ, ಶಿವನ ಅರ್ಚನೆ, ಇಷ್ಟವಾದ ಅನ್ನ ಪಾನಾದಿಗಳು, ಬದುಕಿನ ಹಾದಿಯು ತಪ್ಪದಂತೆ ಕಾಯುವ ಸಜ್ಜನರ ಸಂಗ - ಇವೆಲ್ಲ ಸೇರಿ ಒದಗುವುದಾದರೆ ಗೃಹಸ್ಥಾಶ್ರಮದ ಜೀವನವೇ ಧನ್ಯ ಧನ್ಯ.)

ಗೃಹಿಣೀ ಗೃಹಮುಚ್ಯತೇ: ಗೃಹಿಣಿ ಇದ್ದರೆ ಮಾತ್ರ ಅದು ಗೃಹ ಎನಿಸಿಕೊಳ್ಳುವುದು. ಸುಶಿಕ್ಷಿತ, ಸುಹೃದಯ, ಸುಶೀಲ ಕನ್ಯೆಯನ್ನು ಸುಕುಟುಂಬದಿಂದ ಹಿರಿಯರು ಆರಿಸುವರು. ಧಾರ್ವಿುಕ ಸಂಪತ್ತಿಗಾಗಿ ದೇವಿಯು ಸುಕನ್ಯೆಯಲ್ಲಿ ಪ್ರತಿಷ್ಠಳಾಗಿರುವಳು ಎಂದು ಶಾಸ್ತ್ರ ಹೇಳುವುದು.

ಹಿಂದೂಧರ್ಮದಲ್ಲಿ ಎರಡು ರೀತಿಯ ಗೃಹಪ್ರವೇಶವನ್ನು ಆಚರಿಸಲಾಗುತ್ತದೆ. ಒಂದು ಕನ್ಯೆ ಮದುವೆಯಾಗಿ ಅವಳು ಮೊದಲ ಬಾರಿ ಗಂಡನ ಮನೆಗೆ ಕಾಲಿಡುವ ಸಮಾರಂಭ. ಏಕೆಂದರೆ ಬರುವ ಕನ್ಯೆ ತನ್ನ ಮನೆಗೆ, ಮಕ್ಕಳಿಗೆ, ಕುಟುಂಬಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಭಾವನೆಯಿಂದ, ಪ್ರೀತಿಯಿಂದ ಮನೆಯೊಳಕ್ಕೆ ಪ್ರವೇಶಿಸುವಳು. ಮದುವೆಯ ಸಂದರ್ಭದಲ್ಲಿ ವರನು ಕನ್ಯೆಯ ತಂದೆಗೆ ‘ಧಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ’ ‘ಧರ್ಮ-ಅರ್ಥ-ಕಾಮಗಳಲ್ಲಿ ಅತಿಕ್ರಮಿಸುವುದಿಲ್ಲ’ ಎಂದು ಮಾತನ್ನು ಕೊಡುವನು.

ವಿಷ್ಣುವನ್ನು ಸ್ಮರಿಸಿ, ಅಗ್ನಿಸಾಕ್ಷಿಯಾಗಿ ವಧುವಿನ ಪಾಣಿಗ್ರಹಣವನ್ನು ಮಾಡುವನು. ಯಜ್ಞಕುಂಡದ ಸಮೀಪ ಒಂದು ಕಲ್ಲನ್ನಿಟ್ಟು ಏಳು ಹೆಜ್ಜೆ ನಡೆಯುವರು. ವಧುವು ಪ್ರತಿ ಸುತ್ತಿಗೂ ಆ ಕಲ್ಲನ್ನು ಮೆಟ್ಟುವಳು. ಪ್ರತಿ ಹೆಜ್ಜೆಗೂ ಒಂದೊಂದು ವೇದಮಂತ್ರವಿದೆ. 1). ಅನ್ನಕ್ಕಾಗಿ-ಸಮೃದ್ಧಿಗಾಗಿ, 2). ಬಲ-ಶಕ್ತಿಗಾಗಿ, 3). ವ್ರತಕ್ಕಾಗಿ-ಧರ್ಮಕ್ಕಾಗಿ, 4). ಸುಖಕ್ಕಾಗಿ-ಸಂತಾನಕ್ಕಾಗಿ, 5). ಸಂಪತ್ತು-ಪಶುಸಂಪತ್ತಿಗಾಗಿ, 6). ಸುಖ-ಸಂತೋಷ-ಆಯುಷ್ಯಕ್ಕಾಗಿ. 7). ಯಜ್ಞದ ಹೋತೃಗಳು - ಋತ್ವಿಕ್ಕುಗಳು-ಋಷಿಗಳಿಗಾಗಿ.

‘ಸಖಾ ಸಪ್ತಪದಾ ಭವ’ - ‘ಏಳು ಹೆಜ್ಜೆಗಳನ್ನು ಜೊತೆಗೆ ಇಟ್ಟಿದ್ದರಿಂದ ನೀನು ಸಖಿಯಾದೆ. ನಾವು ಸಖರಾದೆವು. ನಾನು ನಿನ್ನಿಂದ ಅಗಲುವುದು ಬೇಡ, ನೀನು ಅಗಲಬೇಡ. ಒಟ್ಟಿಗೆ ಇರೋಣ. ನಾನು ದಿವಿ-ನೀನು ಪೃಥ್ವಿ, ನಾನು ಸಾಮ-ನೀನು ಋಕ್, ನಾನು ರೇತ-ನೀನು ಧಾರಿಣಿ. ನಾನು ಮನಸ್ಸು-ನೀನು ಮಾತು, ನೀನು ಪುತ್ರರನ್ನು ಪಡೆಯಲು ನನ್ನನ್ನು ಅನುಸರಿಸು.’

ಅವಳ ಹೃದಯ ಮತ್ತು ಮನಸ್ಸಿಗೆ ಏನಾದರೂ ನೋವಾದರೆ ಅದು ಎಲ್ಲರಿಗೂ ಕೆಟ್ಟ ಪರಿಣಾಮವನ್ನು ನೀಡುವುದು. ಅದು ಕ್ರೋಧಾಗ್ನಿಯಾಗಿ ಆ ಕುಟುಂಬವನ್ನು ನಾಶಮಾಡಬಹುದು. ಅವಳ ನಕಾರಾತ್ಮಕ ಭಾವನೆಗಳು ಉತ್ತಮವಾದ ಜೀವನವನ್ನು ಸೃಷ್ಟಿಲಾರದು. ಅವಳು ಗರ್ಭ ಧರಿಸಿದಾಗ, ಮಾನಸಿಕ ನೋವಿನಿಂದ ಸುಪ್ರಜೆಗಳನ್ನು ಹೆರದಿರಬಹುದು.

ಮನವಿಲ್ಲದ ಕನ್ಯೆಯ ಮನನೋಯಿಸಿ ಮನೆ ತುಂಬಿಸಿಕೊಳ್ಳುವುದು ಅಪಾಯ. ಜೀವನಪರ್ಯಂತ ಮನೆ-ಮನವನ್ನು ನರಳುವಂತೆ ಮಾಡುತ್ತದೆ. ಆದ್ದರಿಂದ ಒಂದು ಹೆಣ್ಣು ಅತ್ಯಂತ ಗೌರವ ಹಾಗೂ ಮಂಗಳಕರ ರೀತಿಯಲ್ಲಿ ಮನೆಯೊಳಗೆ ಪ್ರವೇಶಿಸುವಂತೆ ಮುಹೂರ್ತ ಖಚಿತಪಡಿಸಲಾಗುತ್ತಿತ್ತು. ಬದುಕು ಸುಂದರವಾಗಿರಬೇಕೆಂದರೆ ಇಚ್ಛೆಯನ್ನು ಅರಿಯುವ ಪತ್ನಿ ಇರಬೇಕು. ಬೆಚ್ಚನೆಯ ಮನೆಯಿರಬೇಕು. ವೆಚ್ಚಕ್ಕೆ ತಕ್ಕಷ್ಟು ಸಂಪತ್ತಿರಬೇಕು. ಆಗಲೇ ಸಂತೋಷ-ಸಂತೃಪ್ತಿಯನ್ನು ಕಾಣಲು ಸಾಧ್ಯ.

ವಾಸದ ಗೃಹಪ್ರವೇಶ: ಬದುಕಿನಲ್ಲಿ ಕುಟುಂಬವು ಅನ್ಯೋನ್ಯವಾಗಿ ವಾಸಿಸಲು ನಿರ್ವಿುಸಿಕೊಂಡ ಗೃಹಪ್ರವೇಶ. ಪ್ರಮುಖವಾಗಿ ಮನೆಯ ವಿನ್ಯಾಸ, ಅದರ ಸೌಂದರ್ಯ ಮತ್ತು ಅದಕ್ಕೆ ಹಚ್ಚುವ ಬಣ್ಣ ಎಲ್ಲವೂ ಮುಖ್ಯ. ‘ಅತಿಥಿ ದೇವೋ ಭವ’, ‘ಧನ್ಯೋ ಗೃಹಸ್ಥಾಶ್ರಮಃ’ ಎನ್ನುವುದಕ್ಕೆ ಪ್ರತಿಸಾಕ್ಷಿಯಾಗಿರಬೇಕು. ಸಂನ್ಯಾಸಿ, ಬ್ರಹ್ಮಚಾರಿಗಳನ್ನು ತೃಪ್ತಿಪಡಿಸುವ ದೇವಾಲಯವೇ ಗೃಹ. ವಾನಪ್ರಸ್ಥಾಶ್ರಮಿಗಳು ಅರಣ್ಯದಲ್ಲಿಯೇ ಸಿಗುವ ಗೆಡ್ಡೆ-ಗೆಣಸುಗಳನ್ನು ತಿಂದು ಬದುಕುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net