

ಬೆಂಗಳೂರು: ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು 'ಕೆಜಿಎಫ್' ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸಲಾರ್' ರಿಲೀಸ್ಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಸದ್ಯ ಟ್ರೇಲರ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಇಂದು ಬಿಡುಗಡೆಯಾಗಬೇಕಿದ್ದ ಟ್ರೇಲರ್ ಸಮಯದಲ್ಲಿ ಕೊಂಚ ಬದಲಾವಣೆ ಎದುರಾಗಿದ್ದು, ಈಗ ಹೊಸ ವೇಳೆಯನ್ನು ಚಿತ್ರತಂಡ ಘೋಷಿಸಿದೆ.
ಇತ್ತೀಚೆಗಷ್ಟೇ ‘ಸಲಾರ್ ಭಾಗ 1’ ಸೀಸ್ ಫೈರ್ ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಎ-ರೇಟ್ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಇದೀಗ ಜಾಗತಿಕವಾಗಿ ಸಿನಿಪ್ರೇಕ್ಷಕರ ಮುಂದೆ ಅಬ್ಬರಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಪ್ರಭಾಸ್ ಫ್ಯಾನ್ಸ್ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಟ್ರೇಲರ್ ಇಂದು ಬೆಳಗ್ಗೆ 10:42ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ, ಒಂದಷ್ಟು ಸಮಸ್ಯೆಗಳಿಂದ ಇದೀಗ ಸಮಯದಲ್ಲಿ ಬದಲಾವಣೆಯಾಗಿದೆ.
ಈ ಕುರಿತಂತೆ ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, 'ಸಲಾರ್'ನ ಬಹುನಿರೀಕ್ಷಿತ ಟ್ರೇಲರ್ ಇಂದು ಮಧ್ಯಾಹ್ನ 2 ಗಂಟೆಗೆ ನಿಮ್ಮ ಮುಂದೆ ಹಾಜರಾಗಲಿದೆ ಎಂದು ತಿಳಿಸಿದೆ. ಸದ್ಯ ಈ ಸುದ್ದಿ ಇದೀಗ ಪ್ರಭಾಸ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ನಿಟ್ಟುಸಿರು ಬಿಡುವಂತಾಗಿದೆ,(ಏಜೆನ್ಸೀಸ್).