BBKS10: ಬಿಗ್ ಮನೆಯೊಳಗೆ ಸುದ್ದಿವಾಹಿನಿ! ಹೆಡ್‌ಲೈನ್ಸ್​ನಲ್ಲೇ ಸ್ಪರ್ಧಿಗಳ ಟಕ್ಕರ್​

ವಿಜಯವಾಣಿ (96)
Published on

ಬೆಂಗಳೂರು: ಭಾನುವಾರದ ‘ಸೂಪರ್‍ ಸಂಡೆ ವಿತ್‌ ಸುದೀಪ್‌’ ಸಂಚಿಕೆಯಲ್ಲಿ ಮಡಿಕೆ ಒಡೆಯುವ ‘ಅಗ್ರೆಸಿವ್‌’ ಆಕ್ಟಿವಿಟಿ ನಡೆಸಿದ್ದ ಸ್ಪರ್ಧಿಗಳ ಕಿಚ್ಚು ಇನ್ನೂ ಆರಿದಂತಿಲ್ಲ. ಬದಲಿಗೆ ಹೊಸ ವಾರದ ಮೊದಲ ದಿನ ಮೈಕ್​ ಹಿಡಿದ ಸ್ಪರ್ಧಿಗಳು, ಎದುರು ಕುಳಿತಿರುವ ಇತರೆ ಸದಸ್ಯರಿಗೆ ಪಂಚಿಂಗ್​ ಸುದ್ದಿಗಳನ್ನು ವರದಿ ಮಾಡುತ್ತಿದ್ದಾರೆ. ಇದು ಸದ್ಯ ಮನೆಯ ವಾತಾವರಣವನ್ನು ಮತ್ತಷ್ಟು ಬಿಗಿ ಮಾಡಿದಂತಿದೆ.

ಬಿಗ್‌ಬಾಸ್‌ ಮನೆಯ ಸುದ್ದಿಗಳು ನ್ಯೂಸ್‌ ಚಾನಲ್‌ಗಳಲ್ಲಿ ಪ್ರಸಾರವಾಗುವುದು, ಚರ್ಚೆಯಾಗುವುದನ್ನು ದಿನವೂ ನೋಡುತ್ತೇವೆ. ಆದ್ರೆ, ಈ ವಾರ ಬಿಗ್‌ಬಾಸ್‌ ಮನೆಯೊಳಗೆ ಒಂದು ವಿಶೇಷ ಸಂಭವಿಸಿದೆ. ‘ನಮಸ್ಕಾರ, ಬಿಗ್‌ಬಾಸ್‌ ನ್ಯೂಸ್‌ಗೆ ಸ್ವಾಗತ ಸುಸ್ವಾಗತ… ಹೆಡ್‌ಲೈನ್ಸ್‌…’ ಎಂಬ ಧ್ವನಿ ಬಿಗ್‌ಬಾಸ್ ಮನೆಯಲ್ಲಿ ಮೊಳಗಿದೆ.

ಅಂದಹಾಗೆ, ಇದು ಈ ವಾರ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ನೀಡಿದ ಹೊಸ ಟಾಸ್ಕ್‌. ಈ ಟಾಸ್ಕ್‌ನ ಅನ್ವಯ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗಳು, ಸ್ಪರ್ಧಿಗಳ ವರ್ತನೆಗಳು, ಅವರ ಕುರಿತಾದ ಅಭಿಪ್ರಾಯಗಳನ್ನು ಸುದ್ದಿ ರೂಪದಲ್ಲಿ ಓದುತ್ತಾರೆ. ಅದರ ಬಗ್ಗೆ ಪ್ಯಾನಲ್ ಚರ್ಚೆಗಳು ನಡೆಯಲಿವೆ. ತಮ್ಮ ಹೇಳಿಕೆಗಳಿಗೆ ಸ್ಪರ್ಧಿಗಳು ಸ್ಪಷ್ಟೀಕರಣ ನೀಡುತ್ತಾರೆ. ಅದರ ವಿರುದ್ಧವಾಗಿರುವವರು ಅದಕ್ಕೆ ಕೌಂಟರ್ ಕೊಡುತ್ತಾರೆ.

ಒಟ್ಟಾರೆ ಇಷ್ಟು ದಿನ ಬಿನ್‌ ಬಾಸ್​ ಮನೆಯ ಕಿಚನ್‌ನಲ್ಲಿ, ಬೆಡ್‌ರೂಮ್‌ನಲ್ಲಿ, ಜೈಲ್‌ ಬಾಗಿಲಲ್ಲಿ ನಡೆಯುತ್ತಿದ್ದ ಗುಸುಗುಸು-ಪಿಸುಪಿಸು ಮಾತುಗಳನ್ನು, ಚರ್ಚೆಗಳನ್ನು ಸ್ಪರ್ಧಿಗಳು ಉಳಿದ ಸ್ಪರ್ಧಿಗಳ ಮುಂದೆ ಬಹಿರಂಗವಾಗಿ ಆಡಬೇಕಿದೆ. ವಾದ ವಾಗ್ವಾದ ಮಾಡಬೇಕಿದೆ. ಅಷ್ಟಕ್ಕೂ ಏನಿದು ಟಾಸ್ಕ್‌? ಇದರ ಪರಿಣಾಮಗಳೇನು? ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ ಇದು ಹೇಗೆ ಪೂರಕವಾಗಲಿದೆ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net