

ಅಮರಾವತಿ: ಯಂಗ್ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಲಾರ್ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಂಭ್ರಮದ ನಡುವೆಯೆ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ವಿದ್ಯುತ್ ಸ್ಪರ್ಶಿಸಿ ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ.
ಘಟನೆಯು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ನಡೆದಿದ್ದು, ಮೃತರನ್ನು ಬಾಲರಾಜು (27) ಎಂದು ಗುರುತಿಸಲಾಗಿದೆ. ಧರ್ಮಾವರಂನ ರಂಗ ಥಿಯೇಟರ್ ಮುಂಭಾಗ ಫ್ಲೆಕ್ಸ್ ಕಟ್ಟುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಾಲರಾಜು ಹಾಗೂ ಸ್ನೇಹಿತರು ಸಲಾರ್ ಚಿತ್ರ ಬಿಡುಗಡೆ ನಿಮಿತ್ತ ರಂಗ ಥಿಯೇಟರ್ ಮುಂಭಾಗದಲ್ಲಿ ಫ್ಲೆಕ್ಸ್ ಕಟ್ಟುವ ವೇಳೆ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ಬಾಲರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದು, ವಿದ್ಯುತ್ ತಂತಿಗಳು ಕಡಿಮೆ ಎತ್ತರದಲ್ಲಿ ಇದ್ದಿದ್ದರಿಂದ ಅವಘಡ ಸಂಭವಿಸಿದೆ ಎಂದು ಬಾಲರಾಜು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.