

ಪುನೀತ್ ರಾಜಕುಮಾರ್ 48ನೇ ವರ್ಷದ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಪುನೀತ್ ರಾಜಕುಮಾರ್ ಕುಟುಂಬದವರು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಗುರುವಾರ (ಮಾ. 16) ಮಧ್ಯರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸಿದ್ದರು.
ಈ ಬಾರಿ ಅಭಿಮಾನಿಗಳಿಗೆ ಪುನೀತ್ ಕುಟುಂಬದಿಂದ 10 ಸಾವಿರ ಗಿಡಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಸಮಾಧಿ ದರ್ಶನಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು ಸಾವಿರಾರು ಅಭಿಮಾನಿಗಳಿಗೆ ಕುಟುಂಬದವರು ಊಟದ ವ್ಯವಸ್ಥೆ ಮಾಡಿದ್ದರು. ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಪು್ಪ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ರಾಘವೇಂದ್ರ ರಾಜಕುಮಾರ್, ‘ಅಪು್ಪ ನಮಗಿನ್ನೂ ಮಗುನೇ. ಇವತ್ತು ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಅಭಿಮಾನಿಗಳು ಸಾಕ್ಷಿ, ಅವನಿನ್ನೂ ಬದುಕಿದ್ದಾನೆ ಅನ್ನೋದಕ್ಕೆ. ಜನ ಇನ್ನೂ ಅಪು್ಪನ ಜೀವಂತವಾಗಿಟ್ಟುಕೊಂಡಿದ್ದಾರೆ.’ ಎಂದರು.
ಗಮನ ಸೆಳೆದ ಅಪ್ಪು ಪ್ರತಿಮೆ!: ಪುನೀತ್ ರಾಜಕುಮಾರ್ ಸ್ಮಾರಕದ ಬಳಿ ಅಭಿಮಾನಿಗಳು ಅಪು್ಪ ಮೇಣದ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಪುನೀತ್ ರಾಜಕುಮಾರ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅದೇ ಸೂಟ್ ಲುಕ್ನಲ್ಲಿ ಸೋಫಾ ಮೇಲೆ ನಗುತ್ತಾ ಕುಳಿತಿರುವ ಲುಕ್ನಲ್ಲಿ ಪ್ರತಿಮೆ ಮಾಡಲಾಗಿದ್ದು, ಈ ಬಾರಿ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಅಭಿಮಾನಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ. ನಾಲ್ಕು ಅಡಿ ಉದ್ದ ಈ ಮೇಣದ ಪ್ರತಿಮೆಯನ್ನು ಸುಮಾರು ಒಂಬತ್ತು ಲಕ್ಷ ರೂ. ವೆಚ್ಚದಲ್ಲಿ ಅಭಿಮಾನಿಯೇ ನಿರ್ವಿುಸಿದ್ದಾರೆ.
ಅಪ್ಪು, ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ‘ಪವರ್ ಸ್ಟಾರ್’ ಆಗೋದನ್ನ ಆವಾಗ್ಲೇ ಹೇಳುತ್ತಿತ್ತು. ನೀನು ನಕ್ಕರೆ ಎಲ್ಲರೂ ನಗುತ್ತಿದ್ದರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡುತ್ತಿದ್ದರು. ಮನೆಗೆ ಬಂದ ಅತಿಥಿ, ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪು್ಪ ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ. ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ದರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳುತ್ತಿದ್ದೇನೆ - ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ! ಹುಟ್ಟುಹಬ್ಬದ ಶುಭಾಶಯಗಳು ಅಪು್ಪ. | ಶಿವರಾಜಕುಮಾರ್ ನಟ