ಕೈನಲ್ಲಿ ಮತ್ತೆ ಪವರ್​ಪ್ಲೇ! ಸಿಎಂ ಬೆನ್ನಿಗೆ ನಿಂತ ಪರಂ, ಎಂಬಿಪಿ, ಕಾಂಗ್ರೆಸ್​ನಲ್ಲಿ ಗಜಿಬಿಜಿ

Siddaramaiah
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿ ವಿಚಾರವಾಗಿ ರಾಜ್ಯ ನಾಯಕರ ದೆಹಲಿ ದಂಡಯಾತ್ರೆ ಬೆನ್ನಲ್ಲೇ ಕರ್ನಾಟಕದಲ್ಲಿ ‘ಪವರ್ ಪ್ಲೇ’ ರಾಜಕಾರಣ ಮತ್ತೆ ಸದ್ದು ಮಾಡಲಾರಂಭಿಸಿದೆ. ದಿನದ ಬೆಳವಣಿಗೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕೆಂಬ ಇಚ್ಛೆಯನ್ನು ಬಹಿರಂಗವಾಗಿ ದಾಖಲಿಸಿದ್ದಾರೆ. ಆ ಮೂಲಕ ಅಧಿಕಾರ ಹಂಚಿಕೆ ಕುರಿತ ಎರಡನೇ ಹಂತದ ಶೀತಲ ಸಮರ ಶುರುವಾದಂತಾಗಿದೆ.

ಸರ್ಕಾರ ರಚನೆ ಸಂದರ್ಭದಲ್ಲಿ ಸಿಎಂ ಯಾರಾಗಬೇಕೆಂಬ ಪ್ರಕ್ರಿಯೆ ನಡೆದಾಗಲೇ ಹೈಕಮಾಂಡ್ ಸಮ್ಮುಖದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಸೂತ್ರ ಏರ್ಪಟ್ಟಿತ್ತು ಮತ್ತು ಏರ್ಪಟ್ಟಿಲ್ಲ ಎಂಬುದು ಈಗಿನ ಬೆಳವಣಿಗೆಯ ಪ್ರಧಾನ ಹುರುಳಾಗಿದೆ. ಇದೇ ವಿಚಾರವಾಗಿ ಹಲವು ಅಭಿಪ್ರಾಯಗಳು ಮುನ್ನೆಲೆಗೆ ಬಂದಿವೆ.

ಪರಂ ಬ್ಯಾಟಿಂಗ್: ಮುಖ್ಯಮಂತ್ರಿ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಲೆಂದು ನಾನು ಹಾರೈಸುತ್ತೇನೆ. ಸಿದ್ದರಾಮಯ್ಯ ದಾಖಲೆ (ಸಿಎಂ ಸ್ಥಾನದಲ್ಲಿ ಅತೀ ಹೆಚ್ಚಿನ ಅವಧಿ) ಮಾಡಲಿ ಅಂತಲೂ ಬಯಸುತ್ತೇನೆ. ಅವರು ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ದಾಖಲೆ ಆಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಜತೆಗೆ ಹೈಕಮಾಂಡ್ ಅಧಿಕಾರ ಹಂಚಿಕೆ ಸೂತ್ರವನ್ನೇನು ಹೆಣೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ದೇವರಾಜ ಅರಸು ಏಳು ವರ್ಷಗಳ ಕಾಲ ಸಿಎಂ ಆಗಿದ್ದರು. ಸಿದ್ದರಾಮಯ್ಯನವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರುತ್ತಾರೆ. ಏಳಲ್ಲ, ಹತ್ತು ವರ್ಷವೂ ಇರುತ್ತಾರೆ ಎಂದು ಹೇಳಿದರು.

ಮತ್ತೊಬ್ಬ ಹಿರಿಯ ಸಚಿವರು ಪ್ರತಿಕ್ರಿಯಿಸಿ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳ ನಡುವೆ ಯಾವುದೇ ಒಡಂಬಡಿಕೆ ಆಗಿಲ್ಲ. ಆದರೆ, ರಾಹುಲ್ ಗಾಂಧಿಯವರು ಸೂಚಿಸಿದರೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ. ಎಲ್ಲವೂ ಹೈಕಮಾಂಡ್​ಗೆ ಬಿಟ್ಟ ವಿಚಾರ. ಅವಕಾಶ ಸೃಷ್ಟಿಯಾದರೆ ಅನೇಕ ಆಕಾಂಕ್ಷಿಗಳೂ ಇದ್ದಾರೆಂದರು.

ಖರ್ಗೆ ಮಾತಿಗೂ ಕಿಮ್ಮತ್ತಿಲ್ಲ!: ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತನಾಡದಂತೆ ಎಐಸಿಸಿ ಅಧ್ಯಕ್ಷರೇ ಖುದ್ದು ಎಚ್ಚರಿಕೆ ನೀಡಿದ ಬಳಿಕವೂ ಕಾಂಗ್ರೆಸ್​ನಲ್ಲಿ ಪವರ್ ಶೇರಿಂಗ್ ಚರ್ಚೆಗೆ ಬ್ರೇಕ್ ಬಿದ್ದಿಲ್ಲ. ಪಕ್ಷದ ಶಿಷ್ಟಾಚಾರದಂತೆ ರಾಹುಲ್, ಸೋನಿಯಾ ಗಾಂಧಿಯವರಿಗಿಂತಲೂ ಖರ್ಗೆಯವರು ಉನ್ನತ ಸ್ಥಾನದಲ್ಲಿದ್ದಾರೆ. ಅವರ ಅವರ ಮಾತನ್ನೂ ಗೌರವಿಸಿದೆ ಬಹಿರಂಗ ಚರ್ಚೆಯಲ್ಲಿ ನಿರತರಾಗಿದ್ದಾರೆ. ಇದು ಸರ್ಕಾರಕ್ಕೂ, ಪಕ್ಷದ ಇಮೇಜ್ ಧಕ್ಕೆಯಾಗಲು ಕಾರಣವಾಗುತ್ತಿದೆ ಎಂದು ಪಕ್ಷದ ನಾಯಕರೇ ಅಸಮಾಧಾನ ಹೊರಹಾಕಿದ್ದಾರೆ.

ರೆಕಾರ್ಡ್​ಗೆ 326 ದಿನ ಬಾಕಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದರ್ಶನವೊಂದರಲ್ಲಿ ಮಾತನಾಡುವಾಗ, ರಾಜ್ಯದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ದೇವರಾಜು ಅರಸು ಅವರ ದಾಖಲೆ ಮುರಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದರೆ, ಅವರು ಇನ್ನೂ 326 ದಿನ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಬಯಸಿದ್ದಾರೆಂಬುದು ಪರೋಕ್ಷವಾಗಿ ಹೇಳಿದಂತಾಗಿದೆ. ದೇವರಾಜ ಅರಸು ಅವರು 2792 ದಿನ ಸಿಎಂ ಆಗಿದ್ದರು. ಪ್ರಸ್ತುತ ಸಿದ್ದರಾಮಯ್ಯ ಎರಡು ಅವಧಿ ಸೇರಿ ಈವರೆಗೆ 2466 ದಿನ ಕಳೆದಿದೆ.

ಸಂಪುಟ ಸರ್ಕಸ್: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು, ಪವರ್ ಶೇರಿಂಗ್ ಚರ್ಚೆ ನಡುವೆ ದೆಹಲಿ ಮಟ್ಟದಲ್ಲಿ ಸಂಪುಟ ಪುನಾರಚನೆ ಬಗ್ಗೆಯೂ ಬೆಳವಣಿಗೆಗಳು ನಡೆದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಕ್ರಿಯವಾಗಿಲ್ಲದ ಮತ್ತು ಪಕ್ಷಕ್ಕೆ ಉಪಯೋಗವಾಗದ ಸಚಿವರನ್ನು ಕೈಬಿಡಬೇಕೆಂದು ಹೈಕಮಾಂಡ್ ಮುಂದೆ ಕೋರಿಕೆ ಮಂಡನೆಯಾಗಿದೆ ಎಂದು ತಿಳಿದುಬಂದಿದೆ.

ಹಿತೈಷಿಗಳ ಒತ್ತಡವಿದೆ..: ಸಂದರ್ಶನವೊಂದರಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಅಭಿಪ್ರಾಯವೂ ಗುರುವಾರದ ಬೆಳವಣಿಗೆಗಳಿಗೆ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಚುನಾವಣೆ ರಾಜಕೀಯ ಸ್ವಲ್ಪಮಟ್ಟಿಗೆ ಸಾಕು ಎನಿಸುತ್ತಿದೆ. ಮುಂದೆ ಚುನಾವಣೆಯಲ್ಲಿ ನಿಲ್ಲಬಾರದು ಅಂತ ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಆದರೆ, ಜನರು, ಹಿತೈಷಿಗಳು ಮತ್ತು ಸ್ನೇಹಿತರು ರಾಜಕೀಯದಲ್ಲಿ ಮುಂದುವರಿಯಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಕೂಡ ಜನರು ನಮಗೆ ಅಧಿಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದರು.

ಸುರ್ಜೆವಾಲ ಬದಲು: ಶೀಘ್ರದಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಬದಲಾವಣೆ ಸಾಧ್ಯತೆ ಇದೆ. ಉಸ್ತುವಾರಿ ಸ್ಥಾನದಿಂದ ಮುಕ್ತಗೊಳಿಸುವಂತೆ ಅವರೇ ಹೈಕಮಾಂಡ್​ಗೆ ಮನವಿ ಮಾಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಕೆಲ ತಿಂಗಳ ಹಿಂದೆಯೇ ಅವರು ಪ್ರಸ್ತಾಪ ಇಟ್ಟಿದ್ದು, ಫೆಬ್ರವರಿ ಮಧ್ಯ ಭಾಗದಲ್ಲಿ ಎಐಸಿಸಿ ತನ್ನ ನಿಲುವು ಪ್ರಕಟಿಸಲಿದೆ. ಅವರ ಸ್ಥಾನಕ್ಕೆ ಛತ್ತೀಸ್​ಘಡ ಮಾಜಿ ಸಿಎಂ ಭೂಪೇಶ್ ಬಘೕಲ ನೇಮಕ ಆಗುವ ಸಾಧ್ಯತೆ ಹೆಚ್ಚಿದೆ.

ಮಾತಿನ ಹಿಂದಿನ ಲೆಕ್ಕಾಚಾರ

  1. ಪವರ್ ಶೇರಿಂಗ್ ಒಪ್ಪಂದ ಆಗಿದ್ದೇ ಆದರೆ, ಡಿ.ಕೆ.ಶಿವಕುಮಾರ್ ರೇಸ್​ನಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅವರಿಗೆ ಅವಕಾಶ ತಪ್ಪಿಸುವ ಪ್ರಯತ್ನ ಇದಾಗಿರಬಹುದು
  2. ಸಿದ್ದರಾಮಯ್ಯ ಅವರೇ ಮುಂದುವರಿದರೆ ಪವರ್ ಶೇರಿಂಗ್ ವಿಚಾರವೂ ಬರಲ್ಲ, ತಮ್ಮ ಸ್ಥಾನಕ್ಕೂ ಆಪತ್ತು ಇರುವುದಿಲ್ಲ ಎಂಬ ನಿಲುವೇ?
  3. ಸಿಎಂ ಸ್ಥಾನದ ರೇಸ್​ನಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ ಬಂದರೆ ಡಿಕೆಶಿ ಹೊರತಾದ ಆಕಾಂಕ್ಷಿಗಳನ್ನು ಪರಿಗಣಿಸಲಿ ಎಂಬ ಉದ್ದೇಶವೇ?

ಶಾಸಕರು ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ನಮಗೆ ಹೈಕಮಾಂಡ್​ನವರು ಎರಡೂವರೆ ವರ್ಷ ಇವರ ಅಧಿಕಾರ ಅಂತೇನೂ ಹೇಳಿರಲಿಲ್ಲ ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದೇ ಭಾವಿಸಿದ್ದೇವೆ.

| ಪರಮೇಶ್ವರ್ ಗೃಹ ಸಚಿವ

ಹೈಕಮಾಂಡ್ ಸಿದ್ದರಾಮಯ್ಯ ನವರನ್ನು ಸಿಎಂ ಮಾಡಿದೆ. ಪೂರ್ಣಾವಧಿ ಸಿಎಂ ಆಗಿ ಅವರೇ ಇರುತ್ತಾರೆ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಅಲ್ಲದೇ, ಈ ಅವಧಿ ಪೂರೈಸಿ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಬಾರಿಯೂನಾವು ಅಧಿಕಾರಕ್ಕೆ ಬರುತ್ತೇವೆ.

| ಎಂ.ಬಿ. ಪಾಟೀಲ್ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net