ಮಾಹಿತಿ ತಂತ್ರಜ್ಞಾನದ ಶಕ್ತಿಕೇಂದ್ರ

ವಿಜಯವಾಣಿ (6)
Published on

ಭಾರತದಲ್ಲಿ ದೆಹಲಿ, ಮುಂಬೈ, ಚೆನ್ನೈ ಮಹಾನಗರಗಳ ಬಳಿಕ ಬೆಂಗಳೂರಿನ ಹೆಸರು ಕೇಳಿಬರುತ್ತಿದ್ದ ಒಂದು ಕಾಲವಿತ್ತು. ಆದರೆ, ಮಾಹಿತಿ ತಂತ್ರಜ್ಞಾನ ಕಾಲಿಟ್ಟ ಘಳಿಗೆಯಿಂದ ಭಾರತ ಎಂದಾಕ್ಷಣ ಬೆಂಗಳೂರು ಹೆಸರು ಕೇಳಿಬರಲಾರಂಭಿಸಿತು. ಬೆಂಗಳೂರು ಕೇವಲ ಮಾಹಿತಿ-ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ನವೋದ್ಯಮ, ಯೂನಿಕಾರ್ನ್, ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಉದ್ಯೋಗ ಸೃಷ್ಟಿ, ಆನ್​ಲೈನ್ ವಹಿವಾಟು, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಬೆಂಗಳೂರು ಇಡೀ ವಿಶ್ವವನ್ನು ವ್ಯಾಪಿಸಿಕೊಂಡಿದೆ. ಆರ್ಥಿಕತೆ, ಉದ್ಯೋಗ ಸೃಷ್ಟಿ ಕೇಂದ್ರವಾಗಿ ಬೆಂಗಳೂರು ಜಗತ್ತಿನ ಆಕರ್ಷಕ ನಗರವಾಗಿ ಕಾಣುತ್ತಿದೆ.

ಬೆಳೆದುಬಂದ ದಾರಿ

ಹೊಸ ಸಾಫ್ಟ್​ವೇರ್ ನೀತಿ 1984ರಲ್ಲಿ ಜಾರಿಯಾದ ಬಳಿಕ ಭಾರತದಲ್ಲಿ ಹಾರ್ಡ್​ವೇರ್ ಮತ್ತು ಸಾಫ್ಟ್ ವೇರ್​ಗಳ ಆಮದು ಮತ್ತು ರಫ್ತು ವ್ಯವಹಾರವನ್ನು ಉದಾರೀಕರಣಕ್ಕೆ ಒಳಪಡಿಸಲಾಯಿತು. ಇದು ವಿಪೋ› ಮತ್ತು ಇನ್ಪೋಸಿಸ್​ನಂತಹ ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ ಕಂಪನಿಗಳನ್ನು ಸ್ಥಾಪಿಸಲು ಮತ್ತು ಭಾರತೀಯ ಪೋ›ಗ್ರಾಮರ್​ಗಳನ್ನು ನೇಮಿಸಿಕೊಳ್ಳಲು ಅಡಿಪಾಯವನ್ನು ಹಾಕಿತು. 1985ರಲ್ಲಿ ಟೆಕ್ಸಾಸ್ ಇನ್​ಸ್ಟ್ರುಮೆಂಟ್ಸ್ ಎಂಬ ಬಹುರಾಷ್ಟ್ರೀಯ ಕಂಪನಿ ತನ್ನ ಮೊದಲ ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತು. ಇತರ ಕಂಪನಿಗಳು ಅನುಸರಿಸಿದವು. ಹಾಗೆಯೇ ಮಾಹಿತಿ ತಂತ್ರಜ್ಞಾನದ ಕಂಪನಿಗಳಿಗೆ ಪ್ರತಿಭಾವಂತ ಮತ್ತು ಕೌಶಲಯುಕ್ತ ಉದ್ಯೋಗಿಗಳನ್ನು ನೀಡಲು ಐಐಎಸ್ಸಿ, ಐಐಎಂಬಿ, ಯುವಿಸಿಇ ಮತ್ತು ಹತ್ತಾರು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಕೂಡ ಸಾಥ್ ನೀಡಿವೆ. ವ್ಯವಹಾರಕ್ಕೆ ಉತ್ತೇಜನ ನೀಡಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು, ಮೆಟ್ರೋ ಮತ್ತು ಕಂಪನಿಗಳನ್ನು ಆರಂಭಿಸಲು ಜಮೀನು ಸೇರಿ ಹಲವು ರೀತಿಯ ಸಹಕಾರ ಸರ್ಕಾರದ ವತಿಯಿಂದ ಸಿಕ್ಕಿದ್ದು ಕೂಡ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಬೆಂಗಳೂರಿನಲ್ಲಿರುವ ಪ್ರಮುಖ ಕಂಪನಿಗಳು

ಇನ್ಪೋಸಿಸ್, ವಿಪ್ರೋ, ಬಯೋಕಾನ್, ಸಿಸ್ಕೋ, ಗೂಗಲ್, ಟಿಸಿಎಸ್, ಆಕ್ಸೆಂಚರ್, ಒರಾಕಲ್, ಐಬಿಎಂ, ಕಾಗ್ನಿಜಂಟ್, ಮೈಂಡ್​ಟ್ರೀ, ಡೆಲ್, ಎಚ್​ಸಿಎಲ್, ಅಮೆಜಾನ್, ಎಚ್​ಪಿ, ಟೆಕ್ ಮಹಿಂದ್ರಾ, ಎಂಫಸಿಸ್, ಅಡೋಬ್ ಸೇರಿ ಹತ್ತಾರು ಕಂಪನಿಗಳು ಬೆಂಗಳೂರಿನಲ್ಲಿ ನೆಲೆಸಿವೆ.

ಎರಡನೇ ಶ್ರೇಣಿ ನಗರಗಳಲ್ಲಿ...

ಬೆಂಗಳೂರಿನಲ್ಲಿ ಐಟಿ ಉದ್ಯಮ ದೊಡ್ಡಮಟ್ಟದಲ್ಲಿ ಬೆಳೆದ ನಂತರ ‘ಬಿಯಾಂಡ್ ಬೆಂಗಳೂರು’ ಕಲ್ಪನೆ ಯಡಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗ ಳೂರಿನಂತಹ 2ನೇ ಶ್ರೇಣಿಯ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಅಭಿವೃದ್ಧಿಯಾಗುವತ್ತ ಸಾಗಿದೆ.

ರಾಜಕಾರಣಿಗಳಿಂದ ಉತ್ತೇಜನ

ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿಯಾಗಿ ಪರಿವರ್ತಿಸುವ ಕಾರ್ಯ 1990ರ ದಶಕದಲ್ಲೇ ಆರಂಭವಾಯಿತು. ಬಂಗಾರಪ್ಪ, ವೀರಪ್ಪ ಮೊಯಿಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್ ಅಧಿಕಾರಾವಧಿಯಲ್ಲಿ ಹಲವು ರೀತಿಯಲ್ಲಿ ಪ್ರೋತ್ಸಾಹ ದೊರೆಯಿತು. ಭಾರತದ ಮೊದಲ ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್ (ಎಸ್​ಟಿಪಿಐ) ಆರಂಭವಾಗಿದ್ದು ಬೆಂಗಳೂರಿನಲ್ಲಿ, 1990ರಲ್ಲಿ. ನಂತರ 1999ರಿಂದ 2004ರವರೆಗೆ ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಈ ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಕ್ಕಿತು. ಆಗ ರೂಪಿಸಿದ ಕಾರ್ಯತಂತ್ರ, ನೀತಿಗಳು ಮತ್ತು ತೆಗೆದುಕೊಂಡ ಕ್ರಮಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸಲು ಸಹಾಯಕವಾದವು. ಅಲ್ಲದೆ, ಜಾಗತಿಕ ಐಟಿ ದೈತ್ಯ ಕಂಪನಿಗಳನ್ನು ಬೆಂಗಳೂರು ಆಕರ್ಷಿಸಿತು.

ಉದ್ಯೋಗಸೃಷ್ಟಿಯಲ್ಲಿ ಮುಂಚೂಣಿ ನಗರ

ಬೆಂಗಳೂರು ದೇಶದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರಗಳಲ್ಲಿ 5ನೇ ಸ್ಥಾನದಲ್ಲಿದೆ. ಇದು ಸಹಜವಾಗಿ ವಿಶಾಲ ಮಾರುಕಟ್ಟೆ ವ್ಯಾಪ್ತಿಯನ್ನು ಹೊಂದಿದ್ದು, ಉದ್ಯೋಗಸೃಷ್ಟಿಯಲ್ಲಿಯೂ ಮುನ್ನುಗ್ಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಐಟಿ ಕಂಪನಿಗಳಿಂದ ಮಾತ್ರವಲ್ಲದೆ, ಸ್ವಿಗ್ಗಿ, ಜೊಮ್ಯಾಟೊನಂತಹ ನವೋದ್ಯಮಗಳು ಕೂಡ ಉದ್ಯೋಗವನ್ನು ಸೃಷ್ಟಿಸಿವೆ. ಎಲೆಕ್ಟ್ರಿಕಲ್ ವೆಹಿಕಲ್ ತಯಾರಿಕೆ ಕಂಪನಿಗಳು ಕೂಡ ಸಾಥ್ ನೀಡುತ್ತಿವೆ. 14,071 ನವೋದ್ಯಮಗಳು ಕೂಡ ಆರಂಭವಾಗಿರುವುದರಿಂದ ಉದ್ಯೋಗಸೃಷ್ಟಿಗೆ ಅನುಕೂಲವಾಗಿದೆ. ಇದರಿಂದಾಗಿ ಮಾಲ್ ಸಂಸ್ಕೃತಿ, ದೇಶದ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ. ಪಾಸ್​ಪೋರ್ಟ್ ನೋಂದಣಿಯಲ್ಲಿ 3ನೇ ಸ್ಥಾನದಲ್ಲಿದೆ. ರಿಟೇಲ್ ಲೋನ್, ಹೌಸಿಂಗ್, ರಿಯಲ್ ಎಸ್ಟೇಟ್, ಕಾರುಗಳ ಮಾರಾಟ, ಡಿಜಿಟಲ್ ಪೇಮೆಂಟ್, ಕ್ರಿಪ್ಟೊ ಕರೆನ್ಸಿ, ಆನ್​ಲೈನ್ ವಹಿವಾಟುಗಳಲ್ಲಿಯೂ ಮುಂದಿದೆ.

ರಫ್ತು ವಹಿವಾಟು

ರಾಜ್ಯದ ಐಟಿ ಸಂಸ್ಥೆಗಳು 2023-24ನೇ ಸಾಲಿನಲ್ಲಿ 4.11 ಲಕ್ಷ ಕೋಟಿ ರೂ. ಐಟಿ ಸೇವೆಯನ್ನು ರಫ್ತು ಮಾಡಿವೆ. ಅದರಲ್ಲಿ ಬೆಂಗಳೂರು ನಗರ ಹೊರತುಪಡಿಸಿ ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತಿತರ ನಗರಗಳಿಂದಲೇ 10 ಸಾವಿರ ಕೋಟಿ ರೂ.ವರೆಗೆ ಐಟಿ ಸೇವೆ ರಫ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net