

ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಮ ಪಂಚಾಯಿತಿಗಳನ್ನು ಸಬಲೀಕರಣಗೊಳಿಸುವಲ್ಲಿ ದೇಶದಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಕರ್ನಾಟಕವು ಗ್ರಾಮ ಒನ್ ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಮುಂದಾಗಿರುವುದು ಇ- ಆಡಳಿತ ಬಲಗೊಳಿಸುವಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಎನ್ನಬಹುದು. ಮೈಕ್ರೋ ಬ್ಯಾಂಕಿಂಗ್, ಗ್ಯಾಸ್ ಬುಕಿಂಗ್ ರೀತಿಯ ಸೌಲಭ್ಯಗಳನ್ನು ಸೇರ್ಪಡೆಗೊಳಿಸಿ ಗ್ರಾಮ ಒನ್ ಸೇವೆ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಹೋಬಳಿ ಮಟ್ಟದಲ್ಲಿನ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಯನ್ನು ಕೂಡ ಗ್ರಾಮ ಒನ್ ಮೂಲಕ ಒದಗಿಸುವ ಬಗ್ಗೆ ಪ್ರಾಯೋಗಿಕವಾಗಿ ಕೆಲವೆಡೆ ಜಾರಿಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿರುವುದು ಇ- ಆಡಳಿತಕ್ಕೆ ವೇಗವರ್ಧಕವಾಗಿ ಪರಿಣಮಿಸಬಹುದು.
ಕರ್ನಾಟಕವನ್ನು 4 ಕಂದಾಯ ವಿಭಾಗ, 49 ಉಪವಿಭಾಗಗಳಾಗಿ ವಿಭಜಿಸಲಾಗಿದ್ದು, ರಾಜ್ಯದಲ್ಲಿ ಒಟ್ಟಾರೆ 6022 ಗ್ರಾಮ ಪಂಚಾಯಿತಿಗಳಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಪದವೀಧರ ಯುವಕರಿಗೆ ಫ್ರಾಂಚೈಸಿ ನೀಡುವ ಮೂಲಕ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಇದೇ ವರ್ಷ ಜನವರಿ 26ರಂದು ರಾಜ್ಯದ 12 ಜಿಲ್ಲೆಗಳಲ್ಲಿ ಆರಂಭಿಸಲಾಗಿದ್ದು, ನಂತರ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಮೀನು ಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ 100ಕ್ಕೂ ಅಧಿಕ ಸೇವೆಗಳು ಗ್ರಾಮ ಒನ್ನಲ್ಲಿ ಲಭ್ಯವಾಗುತ್ತಿವೆ. ಸೇವಾ ಸಿಂಧುವಿನಲ್ಲಿ ಲಭಿಸುವ ಎಲ್ಲ ಸೇವೆಗಳು, ಸಕಾಲ, ಮಾಹಿತಿ ಹಕ್ಕು, ಮುಖ್ಯಮಂತ್ರಿಗಳ ಪರಿಹಾರ ನಿಧಿ, ಸಣ್ಣ ಬ್ಯಾಂಕಿಂಗ್ ಸೇವೆಗಳನ್ನು ಕೂಡ ಗ್ರಾಮ ಒನ್ನಲ್ಲಿ ಕಲ್ಪಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಜನರು ತಾಲೂಕು ಹಾಗೂ ಜಿಲ್ಲೆಗಳಿಗೆ ಓಡಾಡುವುದು ತಪು್ಪವುದರಿಂದ ಸಮಯ ಹಾಗೂ ಹಣ ಉಳಿಯುತ್ತಿ್ತೆ. ಮಧ್ಯವರ್ತಿಗಳ ಹಾವಳಿಯೂ ಸಹಜವಾಗಿ ತಗ್ಗುತ್ತಿದೆ. ಅಲ್ಲದೆ, ಇಂತಹ ಕೇಂದ್ರಗಳಿಂದ ಸಾವಿರಾರು ಪದವೀಧರರು ಗ್ರಾಮ ಮಟ್ಟದಲ್ಲಿಯೇ ಉದ್ಯೋಗ ಸೃಷ್ಟಿಸಿಕೊಳ್ಳಲು ಅನುಕೂಲವಾಗಿದೆ.
ರಾಜ್ಯದಲ್ಲಿ ಪ್ರಸ್ತುತ 7,274 ಕೇಂದ್ರಗಳಿದ್ದು, ಜನವರಿ ತಿಂಗಳಲ್ಲಿ ಒಟ್ಟು 65,520 ವಹಿವಾಟುಗಳು ನಡೆದಿದ್ದರೆ, ಜೂನ್ನಲ್ಲಿ ಈ ಸಂಖ್ಯೆ 10,36,542ಕ್ಕೆ ಏರಿಕೆಯಾಗಿರುವುದು ಇದರ ಪ್ರಯೋಜನ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಇ- ಅಡಳಿತ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಕರ್ನಾಟಕ ಈ ವರ್ಷ ರಾಷ್ಟ್ರದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಪಂಚಾಯಿತಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸೌಲಭ್ಯಗಳನ್ನು ಒದಗಿಸುವ ರಾಜ್ಯಗಳ ದಕ್ಷತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡುತ್ತದೆ. ಆದರೆ, ನೌಕರಶಾಹಿಯು ಇ- ಆಡಳಿತ ವಿಸ್ತರಣೆಗೆ ಸಹಕಾರ ನೀಡುತ್ತಿಲ್ಲ ಎಂಬ
ಆರೋಪವಿದೆ. ಇದರಿಂದ ತಮ್ಮ ಮಹತ್ವ ಕಡಿಮೆಯಾಗುತ್ತದೆ, ಹುದ್ದೆ ಕಡಿತವಾಗುತ್ತದೆ ಎಂಬೆಲ್ಲ ಆತಂಕ ನೌಕರರಿಗೆ ಇದ್ದಿರಬಹುದಾದರೂ ಲಂಚದ ಆದಾಯಕ್ಕೂ ಕುತ್ತು ಬರುತ್ತದೆ ಎಂಬ ಕಾರಣವೂ ಇರುವುದು ಗೌಪ್ಯ ಸಂಗತಿಯೇನಲ್ಲ. ಇದರೊಟ್ಟಿಗೆ, ಗ್ರಾಮಮಟ್ಟದಲ್ಲಿನ ಸಮಸ್ಯೆಗಳಲ್ಲಿ ಆದಷ್ಟು ಅಲ್ಲಿಯೇ ಪರಿಹರಿಸುವ ಕೆಲಸವೂ ವೇಗ ಪಡೆಯಬೇಕಿದೆ. ಉದಾ-ಮುಖ್ಯಮಂತ್ರಿಗಳು ನಡೆಸುವ ಜನತಾದರ್ಶನದಂತಹ ಕಾರ್ಯಕ್ರಮಗಳಲ್ಲಿ ವೃದ್ಧಾಪ್ಯ ವೇತನದಂತಹ ಚಿಕ್ಕಪುಟ್ಟ ಸಮಸ್ಯೆಗಳು ಸಹ ಬರುತ್ತವೆ. ಇವೆಲ್ಲ ಸ್ಥಳೀಯವಾಗಿಯೇ ಬಗೆಹರಿಯಬೇಕು. ಅಂದಾಗ ಗ್ರಾಮಗಳ ಸಬಲೀಕರಣ ಆಶಯಕ್ಕೆ ಅರ್ಥಬರುತ್ತದೆ.