ಕೈನಲ್ಲಿ ಪವರ್ ಪಾಲಿಟಿಕ್ಸ್ ತೀವ್ರ

ವಿಜಯವಾಣಿ (3)
Published on

ಬೆಂಗಳೂರು: ‘ಪವರ್ ಶೇರಿಂಗ್’ ಹಾಗೂ ‘ಒಬ್ಬರಿಗೆ ಒಂದೇ ಹುದ್ದೆ’ ವಿಚಾರ ಈಗ ಕಾಂಗ್ರೆಸ್​ನ ಆಂತರಿಕ ಚರ್ಚೆಯಾಗಿ ಉಳಿಯದೆ ಪರಸ್ಪರ ದಾಳ ಉರುಳಿಸುವ ಸನ್ನಿವೇಶ ಸೃಷ್ಟಿಯಾಗಿದೆ.

ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಸಚಿವರ ಡಿನ್ನರ್ ಮೀಟಿಂಗ್ ನಡೆದಿದ್ದು, ಮುಂದುವರಿದ ಭಾಗವಾಗಿ ಎಸ್ಸಿ-ಎಸ್ಟಿ ಸಚಿವ, ಶಾಸಕರು ಸಭೆ ಕರೆದಿದ್ದು, ಸಮಾವೇಶಕ್ಕೆ ತಯಾರಿ ನಡೆಸಿದ್ದು, ಈ ಎಲ್ಲ ಚಟುವಟಿಕೆಗೆ ಹೈಕಮಾಂಡ್ ಬ್ರೇಕ್ ಹಾಕಿದ್ದೂ ಆಗಿದೆ. ಆದರೀಗ ಈ ಬೆಳವಣಿಗೆ ಮತ್ತೊಂದು ಹಂತ ತಲುಪಿದೆ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಕೆಳಗಿಳಿಯಬೇಕೆಂಬ ದನಿ ಬಲಗೊಳಿಸುವ ಕಾರ್ಯ ಬಿರುಸುಗೊಂಡಿದೆ ಮತ್ತು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದರೆ ನಡೆಯಲ್ಲ ಎಂಬ ಗಡುಸು ಅಭಿಪ್ರಾಯವೂ ಹೊರಬಿದ್ದಿದೆ.

ಶುಕ್ರವಾರದ ಬೆಳವಣಿಗೆಯಲ್ಲಿ ಮಾಧ್ಯಮಗಳಿಗೆ ಸಹಕಾರ ಸಚಿವ ರಾಜಣ್ಣ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ, ಯಾವುದೇ ಅಧಿಕಾರ ಹಂಚಿಕೆ ಆಗಿಲ್ಲ. ಹಂಚಿಕೆಯಾಗಿದೆ ಎಂದು ಹೈಕಮಾಂಡ್ ಕೂಡ ಹೇಳಿಲ್ಲ. ಹಾಗಾಗಿ ಸಿದ್ದರಾಮಯ್ಯ ಐದು ವರ್ಷ ಪೂರ್ಣಗೊಳಿಸುತ್ತಾರೆ. ಪದಚ್ಯುತಿ ಮಾಡುತ್ತೇವೆ, ಇಳಿಸುತ್ತೇವೆ ಎಂದರೆ ಅದು ನಡೆಯುವುದಿಲ್ಲ ಎಂದು ಗುಟುರು ಹಾಕಿದ್ದಾರೆ. ಡಿ.ಕೆ.ಶಿವಕುಮಾರ್​ಗೆ ಸಿಎಂ ಸ್ಥಾನ ಎರಡೂವರೆ ವರ್ಷ ಏಕೆ? ಮುಂದಿನ ಅವಧಿಗೆ ಐದು ವರ್ಷ ಸಿಎಂ ಆಗಲಿ ಎಂದು ನೇರವಾಗಿ ಸಲಹೆ ನೀಡಿದ್ದಾರೆ. ಇನ್ನೊಂದೆಡೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಕೂಡ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದಿದ್ದಾರೆ.

ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಯಾರೂ ದಲಿತರ ಸಮಸ್ಯೆ ಚರ್ಚೆಗೆ ಬ್ರೇಕ್ ಹಾಕಲು ಆಗುವುದಿಲ್ಲ. ನಾವು ಸಭೆ ಸೇರುವುದನ್ನು ನಿಲ್ಲಿಸುವುದಕ್ಕೂ ಆಗಲ್ಲ, ನಿಲ್ಲಿಸಿದರೆ ಕೇಳುವುದೂ ಇಲ್ಲ ಎಂದು ಹೇಳಿದ್ದು, ಪರಿಸ್ಥಿತಿ ಈ ಹಂತದಲ್ಲಿ ನಿಯಂತ್ರಣಕ್ಕೆ ಬರುವುದಿಲ್ಲ ಎಂಬ ಸಂದೇಶ ಕಳಿಸಿದಂತಿದೆ.

ಬೆಳವಣಿಗೆ ಹಿಂದೆ-ಮುಂದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಸಂದರ್ಶನವೊಂದರಲ್ಲಿ ಪವರ್ ಶೇರಿಂಗ್ ವಿಚಾರ ಹಂಚಿಕೊಂಡಿದ್ದರು. ಇದು ಸಿದ್ದರಾಮಯ್ಯ ಪಾಳಯಕ್ಕೆ ಇರಿಸುಮುರಿಸು ಉಂಟುಮಾಡಿತ್ತು. ಮುಂದುವರಿದ ಬೆಳವಣಿಗೆಯಲ್ಲಿ ನಾಲ್ವರು ಸಚಿವರು ನಿರಂತರವಾಗಿ ಸಭೆ ನಡೆಸುತ್ತಲೇ ಇದ್ದರು. ಆದರೆ, ಕಳೆದ ಗುರುವಾರ ಸಂಪುಟ ಸಭೆ ಬಳಿಕ ನಡೆಸಿದ ಡಿನ್ನರ್ ಮೀಟಿಂಗ್ ಸಂಚಲನ ಮೂಡಿಸಿತ್ತು. ಜತೆಗೆ ಎಸ್ಸಿ-ಎಸ್ಸಿ ಸಚಿವ, ಶಾಸಕರು, ಮುಖಂಡರ ಸಭೆ ನಡೆಸಿ, ಒಗ್ಗಟ್ಟು ಪ್ರದರ್ಶನಕ್ಕೆ ಸಮಾವೇಶ ನಡೆಸುವ ಕುರಿತು ಹೆಜ್ಜೆ ಮುಂದಿಟ್ಟಾಗ ಹೈಕಮಾಂಡ್ ಮಧ್ಯ ಪ್ರವೇಶಿಸಿತ್ತು.

ಎಸ್ಸಿ-ಎಸ್ಟಿ ಸಚಿವ, ಶಾಸಕ, ಮುಖಂಡರ ಸಭೆಗೆ ಹೈಕಮಾಂಡ್ ತಡೆ ಹಾಕಿದ್ದು ಹಲವು ಸಚಿವರ ಕಣ್ಣು ಕೆಂಪು ಮಾಡಿದೆ. ಈ ಪ್ರಯತ್ನದ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೆಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಚಿವ ರಾಜಣ್ಣ, ಡಿನ್ನರ್ ಮೀಟಿಂಗ್ ತಪ್ಪು ಅನ್ನೋದು ಸರಿಯಲ್ಲ. ಗೃಹ ಸಚಿವ ಪರಮೇಶ್ವರ ಕರೆದಿದ್ದ ಸಭೆ ಮುಂದೂಡಿಕೆಯಾಗಿದೆಯೇ ಹೊರತು ರದ್ದಾಗಿಲ್ಲ. ಪಕ್ಷದ ರಾಜ್ಯ ಉಸ್ತುವಾರಿಯವರು ಪರಮೇಶ್ವರ ಜತೆ ಮಾತನಾಡಿ ಸಭೆ ಮುಂದೂಡಿದ್ದಾರೆ ಎಂದರು.

ಕೆಳವರ್ಗಕ್ಕೆ ಸಿಎಂ ಸ್ಥಾನ ಸಿಗಬೇಕು ಎಂಬ ಬೇಡಿಕೆ ಇದೆ. ಕಾಂಗ್ರೆಸ್ ಬಡವರ ಪರ ಇರುವ ಪಕ್ಷ. ಈ ಬಗ್ಗೆ ಜ.13ರಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯ ಕೇಳಿದರೆ ಹೇಳುತ್ತೇನೆ. ನಾನೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಈಗಾಗಲೇ ಹೈಕಮಾಂಡ್ ಎಂಪಿ ಚುನಾವಣೆವರೆಗೆ ಡಿಕೆಶಿ ಅಧ್ಯಕ್ಷರು ಎಂದು ಹೇಳಿದ್ದರು. ಹಾಗಾಗಿ ಇದರ ಬಗ್ಗೆ ಕೇಳುತ್ತಿದ್ದೇವೆ. ನನಗೂ ಅವಕಾಶ ಸಿಕ್ಕಿದರೆ ನಿಭಾಯಿಸುತ್ತೇನೆ ಎಂದು ಹೇಳಿದರು.

ಡಿಕೆಶಿಗೆ ಪಂಚ ಸಂದೇಶ

1.ಅಧಿಕಾರ ಹಂಚಿಕೆ ಆಗಿಲ್ಲ. ಹಂಚಿಕೆ ಆಗಿದೆ ಎಂದು ಹೈಕಮಾಂಡ್ ಹೇಳಿಲ್ಲ.

2.ಕೆಳವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಬೇಡಿಕೆ ಇದೆ.

3.ಈ ಅವಧಿಯಲ್ಲಿ ಕೆಳವರ್ಗದವರಿಗೆ ಮುಖ್ಯಮಂತ್ರಿ ಸ್ಥಾನ ಉಳಿಯಬೇಕು.

4.ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ, ನಮಗೂ ಸಾಮರ್ಥ್ಯವಿದೆ.

5. ಈ ಅವಧಿಯಲ್ಲಿ ಸಿಎಂ ಸ್ಥಾನಕ್ಕೆ ಪ್ರಯತ್ನಿಸಬೇಡಿ, ಮುಂದಿನ ಅವಧಿಗೆ ಬೇಕಾದರೆ ನೋಡಿಕೊಳ್ಳಿ.

ಆಂತರಿಕ ನೆಮ್ಮದಿ ಭಂಗ ತೇಪೆಗೆ ದಾರಿ ಹುಡುಕಾಟ

ಬೆಂಗಳೂರು: ಡಿನ್ನರ್ ಮೀಟಿಂಗ್ ಹಾಗೂ ಎಸ್ಸಿ, ಎಸ್ಟಿ ಸಚಿವ, ಶಾಸಕರ ಸಭೆ ಆಯೋಜನೆ ಈಗ ಕಾಂಗ್ರೆಸ್​ನ ಆಂತರಿಕ ನೆಮ್ಮದಿ ಭಂಗಗೊಳಿಸಿದೆ. ಈ ವಾತಾವರಣ ತಿಳಿಗೊಳಿಸಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಜ.13ರಂದು ಪಕ್ಷದ ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಎಲ್ಲರ ಅಭಿಪ್ರಾಯ ಆಲಿಸಲಿದ್ದು, ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿದೆ. ಇದೀಗ ಎಸ್ಸಿ,ಎಸ್ಟಿ ಶಾಸಕರು, ಮುಖಂಡರ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿಲ್ಲ ಎಂಬ ನಕಾರಾತ್ಮಕ ಚರ್ಚೆ ಆರಂಭವಾಗಿದೆ. ಸಚಿವರೇ ಅಸಮಾಧಾನ ಹೊರಹಾಕಿರುವುದು ಪಕ್ಷಕ್ಕೆ ದುಬಾರಿಯಾಗುತ್ತಿದೆ.

ಇದೇ ಕಾರಣಕ್ಕೆ ಗಾಂಧಿ ಭಾರತ ಕಾರ್ಯಕ್ರಮದ ಬಳಿಕ ಸಭೆ ನಡೆಸಲು ಅವಕಾಶ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ, ಕೆಪಿಸಿಸಿ ಅಧ್ಯಕ್ಷರು ಒಪು್ಪತ್ತಿಲ್ಲ ಎಂದು ಸಿದ್ದರಾಮಯ್ಯ ಆಪ್ತ ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಸರ್ಕಾರ 2 ವರ್ಷ ಪೂರ್ಣಗೊಳ್ಳುವವರೆಗೂ ಸಂಪುಟ ಪುನಾರಚನೆಗೆ ಕೈಹಾಕದೇ ಇರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ನಮ್ಮ ಪಕ್ಷದಲ್ಲೂ ಬಣ ರಾಜಕೀಯ ಇದೆ. ಅದನ್ನು ವರಿಷ್ಠರು ಸರಿಮಾಡುತ್ತಾರೆ. ದಲಿತ ಶಾಸಕರು, ಸಚಿವರ ಪ್ರತ್ಯೇಕ ಸಭೆ ಮುಂದೂಡಲ್ಪಟ್ಟಿದೆ ಅಷ್ಟೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರೋಧವೇನೂ ಇಲ್ಲ. ಡಿಕೆಶಿ ಶತ್ರುಸಂಹಾರ ಯಾಗ ಮಾಡುತ್ತಿರುವುದು ಅವರ ಭಕ್ತಿ. | ಸತೀಶ್ ಜಾರಕಿಹೊಳಿ ಸಚಿವ ಸಚಿವರು, ಶಾಸಕರು ಒಂದೆಡೆ ಊಟ ಮಾಡಿದರೆ ತಪ್ಪಿಲ್ಲ. ಒಮ್ಮೊಮ್ಮೆ ಬಸವರಾಜ ಬೊಮ್ಮಾಯಿ ಜತೆ ನಾನೂ ಊಟ ಮಾಡುತ್ತೇನೆ. ಅದರಲ್ಲಿ ತಪ್ಪೇನು? ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ. | ಎಂ.ಬಿ. ಪಾಟೀಲ ಸಚಿವ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡ ಬೇಕಾದ ಸಂದರ್ಭದಲ್ಲಿ ಮಾಡುತ್ತಾರೆ. ಈಗ ಬದಲಾವಣೆ ಮಾಡಿದರೆ ತಪ್ಪಾಗುವುದಿಲ್ಲ, ಬದಲಾವಣೆ ಮಾಡಿಲ್ಲ ಅಂದರೂ ತಪ್ಪಾಗುವುದಿಲ್ಲ. | ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net