ಕಾಂಗ್ರೆಸ್‌ಗೆ ಅಧಿಕಾರ ಸಿಗಲೆಂದು ಬಿಜೆಪಿಯ ಕೆಲವರ ಬಯಕೆ ; ಸಚಿವ ಸತೀಶ ಜಾರಕಿಹೊಳಿ ಟಾಂಗ್

Satish Jarkiholi
Published on

ಬೆಂಗಳೂರು: ರಾಜ್ಯದಲ್ಲಿ ಸ್ಪಷ್ಟ ಜನಾದೇಶದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಕೇಂದ್ರದಲ್ಲೂ ಅಧಿಕಾರಕ್ಕೆ ಬರಲಿ ಎಂದು ಬಿಜೆಪಿಯ ಕೆಲವರು ಬಯಸುತ್ತಿದ್ದಾರೆ. ಅವರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ಕಮಲಪಡೆ ಕಾಲೆಳೆದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ರಾಷ್ಟ್ರಮಟ್ಟದ ರಾಜಕಾರಣ ಮಾಡುವವರು ಅದಕ್ಕೊಪ್ಪುವಂತಹ ಮಾತನಾಡಬೇಕು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದ್ದು, ಪತನವಾಗಲಿದೆ ಎಂಬ ಭವಿಷ್ಯವೂ ಹುಸಿಯಾಗಲಿದೆ.

ಕಾಂಗ್ರೆಸ್‌ಗೆ ಜನರು ಪೂರ್ಣ ಐದು ವರ್ಷಗಳ ಅಧಿಕಾರ ನೀಡಿದ್ದಾರೆ. ಸರ್ಕಾರ ಬೀಳಿಸುವ ಪ್ರಯತ್ನ ಲಿಸುವುದಿಲ್ಲ. ಬಿ.ಎಲ್.ಸಂತೋಷ್ ಅವರನ್ನು ಬಿಜೆಪಿಯೊಳಗೆ ವಿರೋಧಿಸುವವರಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿವಿದರು.

ಕೆಲವರ ಮುಕ್ತ ಭೇಟಿ

ಕಾಂಗ್ರೆಸ್ ಪಕ್ಷಕ್ಕೆ ಬೆಳಗಾವಿ ವಿಭಾಗದಲ್ಲಿ ಸದ್ಯಕ್ಕೆ ಸೇರುವವರು ಯಾರೂ ಇಲ್ಲ. ಬಿಜೆಪಿ, ಜೆಡಿಎಸ್‌ನ ಕೆಲವರನ್ನು ಮುಕ್ತವಾಗಿ ಭೇಟಿ ಮಾಡಿ ಚರ್ಚಿಸುತ್ತಿದ್ದೇವೆ. ಕೆಲವರೊಂದಿಗೆ ಪರೋಕ್ಷ ಸಂಪರ್ಕವಿದ್ದು, ಎಲ್ಲದಕ್ಕೂ ಸಮಯ, ಸಂದರ್ಭ ಬೇಕು. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಾರ್ಹ ಎಂದರು.

ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್ ಗಾಗಿ ಮುಸುಕಿನ ಗುದ್ದಾಟವೇನಿಲ್ಲ. ಕಳೆದ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ರಾಜಕೀಯ ಸ್ವಾಭಾವಿಕ. ಯಾರಾದರೊಬ್ಬರು ಸ್ಪರ್ಧಿಸಬೇಕು, ಅದಕ್ಕಾಗಿ ಪ್ರಯತ್ನ ನಡೆದಿದೆ ಎಂದು ಮುಗುಮ್ಮಾಗಿ ಉತ್ತರಿಸಿದರು.

ಬೆಳಗಾವಿ ನಗರಪಾಲಿಕೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ನನ್ನ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ. ಯಾವುದೇ ಒಂದು ಹುದ್ದೆ ವಿಷಯವಷ್ಟೇ. ಎಲ್ಲ ನನ್ನ ಅಂಡರ್‌ನಲ್ಲೇ ನಡೆಯಬೇಕು ಎಂದಲ್ಲ.

ಯಾರೇ ಬಂದರೂ ಪಾಲಿಕೆ ಕೆಲಸ ಮಾಡಬೇಕಾಗುತ್ತದೆ. ಅವರಿಗಾಗಿ ಕೆಲಸ ಮಾಡಿಸಿದವರನ್ನು ಹಾಕಿಸಿಕೊಂಡಿದ್ದರು ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net