ಗಾಂಧಿನಗರ:
ರಾಜ್ಯದ ನವೀಕರಿಸಬಹುದಾದ ಇಂಧನದ ಈಗಿನ 18 ಗಿ.ವ್ಯಾ. ಸಾಮರ್ಥ್ಯದ ಜತೆಗೆ ಮುಂದಿನ 6 ವರ್ಷಗಳಲ್ಲಿ 19.2 ಗಿ.ವ್ಯಾ. ಸೇರ್ಪಡೆಗೊಳಿಸಲಾಗುವುದು ಎಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.
ಗುಜರಾತಿನ ಗಾಂಧಿನಗರದ ಮಹಾತ್ಮ ಮಂದಿರ ಸಭಾಂಗಣದಲ್ಲಿ ನಡೆಯುತ್ತಿರುವ 3 ದಿನಗಳ ನವೀಕರಿಸಬಹುದಾದ ಇಂಧನ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದರು.
2030ರ ವೇಳೆಗೆ ದೇಶದ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಸಾಮರ್ಥ್ಯವನ್ನು 500 ಗಿ.ಗ್ಯಾ. ಹೆಚ್ಚಿಸಬೇಕೆಂಬ ಸಂಕಲ್ಪಕ್ಕೆ ಬದ್ಧವಾಗಿ ರಾಜ್ಯದ ಹಸಿರು ಇಂಧನ ಉತ್ಪಾದನೆ ಸಾಮರ್ಥ್ಯಕ್ಕೆ ಮುಂದಿನ 6 ವರ್ಷಗಳಲ್ಲಿ 19.2 ಗಿ.ವ್ಯಾ. ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗುವುದು ಎಂದರು.
ಪಾವಗಡ ಸೋಲಾರ್ ಪಾರ್ಕ್ 2ನೇ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪವನ ವಿದ್ಯುತ್ ಸಾಮರ್ಥ್ಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದ್ದು, ಒಟ್ಟಾರೆ ಸೌರ ವಿದ್ಯುತ್ ಸಾಮರ್ಥ್ಯದಲ್ಲೂ ರಾಜ್ಯ 3ನೇ ಸ್ಥಾನದಲ್ಲಿದೆ. ಒಟ್ಟಾರೆ ಜಲವಿದ್ಯುತ್ ಸಾಮರ್ಥ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಈ ನಾಲ್ಕು ವಲಯಗಳಲ್ಲಿನ ರಾಜ್ಯದ ಸಾಧನೆಗಾಗಿ ಈ ಪ್ರಶಸ್ತಿ ದೊರೆತಿದೆ ಎಂದರು. ಹಸಿರು ಇಂಧನ ಸಾಮರ್ಥ್ಯ ಹೆಚ್ಚಳಕ್ಕೆ ಈಗಾಗಲೇ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಜತೆಗೆ ಈ ವಲಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಅಲ್ಲದೇ, ಯೋಜನೆಗಳು ಸಕಾಲದಲ್ಲಿ ಕಾರ್ಯಗತಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪೂರಕ ನೀತಿ ರೂಪಿಸಲಾಗಿದೆ ಎಂದರು.
ಭೂಸ್ವಾಧೀನ ಪ್ರಕ್ರಿಯೆಗಳನ್ನು ಸರಳೀಕರಣ ಮಾಡಿ ತ್ವರಿತ ಅನುಮತಿಗಳನ್ನು ನೀಡಿದ್ದೇವೆ ಮತ್ತು ರಾಜ್ಯದ ಕೈಗಾರಿಕಾ ನೀತಿಗೆ ಅನುಗುಣವಾಗಿ ಯೋಜನೆಗಳಿಗೆ ಪ್ರೋತ್ಸಾಹಕಗಳನ್ನು ಒದಗಿಸಿದ್ದೇವೆ. ಈ ಕ್ರಮಗಳಿಂದಾಗಿ ಕರ್ನಾಟಕವು ಹೂಡಿಕೆಗೆ ಆದ್ಯತೆಯ ತಾಣವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣವೂ ಹೆಚ್ಚಿದೆ ಎಂದರು.
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪಯ್ಯ ಮಾತನಾಡಿ, 2023-24ರ ಆರ್ಥಿಕ ವರ್ಷದಲ್ಲಿಯೇ ನಾವು 1,027 ಮೆವಾ ಸಾಮರ್ಥ್ಯದ ಪವನ ಯೋಜನೆಗಳನ್ನು ನಿಯೋಜಿಸಿದ್ದೇವೆ. ಸ್ಥಿರ ಮತ್ತು ವಿಶ್ವಾಸಾರ್ಹ ಇಂಧನ ಪೂರೈಕೆಯ ಖಾತ್ರಿಗಾಗಿ ಸೌರ ಮತ್ತು ಪವನ ಶಕ್ತಿಯನ್ನು ಸಂಯೋಜಿಸಲಾಗುತ್ತಿದೆ. ಉದ್ಯಮಗಳು ಮತ್ತು ಹೂಡಿಕೆದಾರರಿಗೆ ರಾಜ್ಯದಲ್ಲಿ ಅನುಕೂಲಕರ ವಾತಾವರಣವಿದೆ ಎಂದರು.
ಪ್ರಧಾನಿ ಮೋದಿ ಭೇಟಿ:
ಹೊಯ್ಸಳ ವಾಸ್ತು ಶೈಲಿಯಲ್ಲಿ ನಿರ್ಮಿಸಿರುವ ಕರ್ನಾಟಕ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು. ನವೀಕರಿಸಬಹುದಾದದ ಇಂಧನ- ಸೌರ (ಪಾವಗಡ ಸೋಲಾರ್ ಪಾರ್ಕ್), ರಾಜ್ಯದ ಪವನ ವಿದ್ಯುತ್, ಜೈವಿಕ ಇಂಧನ, ಕಿರು ಜಲ ವಿದ್ಯುತ್ ಯೋಜನೆಗಳ ಬಗ್ಗೆ ಪ್ರಧಾನಿಗೆ ಗೌರವ ಗುಪ್ತಾ ವಿವರಿಸಿದರು. ಪ್ರಧಾನಿ ಮೋದಿ ಅವರ ಜತೆ ಹೊಸ ಹಾಗೂ ನವಿಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ನಮ್ಮ ಪೆವಿಲಿಯನ್‌ಗೆ ಭೇಟಿ ನೀಡಿ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಧನೆಗಳ ಕುರಿತಂತೆ ಮಾಹಿತಿ ಪಡೆದರು.
ಸಮಾವೇಶದಲ್ಲಿ 4 ಪಾಲುದಾರ ರಾಷ್ಟ್ರಗಳು, 7 ಪಾಲುದಾರ ರಾಜ್ಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಖಾಸಗಿ ಸಂಸ್ಥೆಯ ಪ್ರತಿನಿಧಿಗಳು, ಹೂಡಿಕೆದಾರರು ಸೇರಿ ಒಟ್ಟು 10,000 ಮಂದಿ ಭಾಗಿಯಾಗಿದ್ದರು.