ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧನೆ ಹೆಗ್ಗಳಿಕೆ 1,403 ಕೋಟಿ ರೂ ವಿದ್ಯುತ್ ಮಾರಾಟ: ಸಚಿವ ಜಾರ್ಜ್

K J George
Published on

ಬೆಂಗಳೂರು:
ವಿದ್ಯುತ್ ವಲಯದಲ್ಲಿ ಈಗಾಗಲೇ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಹಾಕಿರುವ ಇಂಧನ ಇಲಾಖೆ, ಮೇ 18 ರಿಂದ ಈ ತನಕ ಹೊರ ರಾಜ್ಯಗಳಿಗೆ 1,403 ಕೋಟಿ ರೂ. ಬೆಲೆಯ ವಿದ್ಯುತ್ ಮಾರಾಟ ಮಾಡಿ ಸಾಧನೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾಜ್, ಪ್ರತಿನಿತ್ಯ 30 ರಿಂದ 40 ಮಿಲಿಯನ್ ಯೂನಿಟ್ (ಎಂಯು)ವಿದ್ಯುತ್ ಮಾರಾಟ ಮಾಡಲಾಗುತ್ತಿದೆ ಎಂದರು.
ಪ್ರಸ್ತುತ ರಾಜ್ಯದಲ್ಲಿ ನಿತ್ಯ ಸರಾಸರಿ 250 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಪೈಕಿ 20 ಎಂಯು ಅನ್ನು ಬೇಸಿಗೆಯಲ್ಲಿ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದುಕೊಂಡಿರುವ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. ಉಳಿಕೆಯಾಗುವ ಸುಮಾರು 40 ಮಿಲಿಯನ್ ಯೂನಿಟ್ ಮಾರಾಟ ಮಾಡಲಾಗುತ್ತಿದೆ. 180 ಮಿಲಿಯಿನ್ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ ಎಂದರು.

ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ
ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ 1,006, ಬಳ್ಳಾರಿ ಉಷ್ಣ ವಿದ್ಯುತ ಸ್ಥಾವರದಲ್ಲಿ 1,049, ಯರಮರಸ್ ಉಷ್ಣ ವಿದ್ಯುತ ಸ್ಥಾವರದಲ್ಲಿ 898 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮಳೆ ಹೆಚ್ಚಾಗಿದ್ದರಿಂದ ಜಲ ವಿದ್ಯುತ್ ಉತ್ಪಾದನಾ ಪ್ರಮಾಣ 34.96 ಎಂಯುಗೆ ಹೆಚ್ಚಾಗಿರುವುದು ದಾಖಲೆಯಾಗಿದೆ. ಸೌರ ಶಕ್ತಿಯಿಂದ 34.64 ಹಾಗೂ ಪವನದಿಂದ 60.05 ಎಂಯು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದರು.

103 ದಿನ ಸತತ ನಡೆದ ಘಟಕ
ಕಳೆದ ಸಾಲಿನಲ್ಲಿ ಕೆಪಿಸಿಎಲ್ ನಿಂದ ನಿರ್ವಹಣೆ ಮಾಡುತ್ತಿರುವ ರಾಜ್ಯದ ಮೂರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ ಜತೆಗೆ ದಾಖಲೆಯ ಆದಾಯವನ್ನೂ ಗಳಿಸಲಾಗಿದೆ. 2022-23ನೇ ಸಾಲಿನಲ್ಲಿ 18,419 ಎಂಯು ವಿದ್ಯುತ್ ಉತ್ಪಾದನೆಯಾಗಿ 9,326 ಕೋಟಿ ಆದಾಯ ಬಂದಿದ್ದರೆ, 2023-24ನೇ ಸಾಲಿನಲ್ಲಿ 22,313 ಎಂಯು ಉತ್ಪಾದನೆ ಮಾಡಿ 10,916 ಕೋಟಿ ಆದಾಯ ಗಳಿಸಲಾಗಿದ್ದು, ಇದು ಈವರೆಗಿನ ದಾಖಲೆ ಎಂದರು. ಆರ್‌ಟಿಪಿಎಸ್‌ನ ಉತ್ಪಾದನಾ ಘಟಕಗಳು ಬೇಸಿಗೆಯಲ್ಲಿ ಸತತ 103 ದಿನ ವಿದ್ಯುತ್ ಉತ್ಪಾದಿಸಿರುವುದು ಕೂಡ ಹೊಸ ದಾಖಲೆ ಎಂದರು.

ಮುಂದಿನ ತಿಂಗಳು ಉದ್ಘಾಟನೆ
ಯಲಹಂಕ ಸಮೀಪ ಸ್ಥಾಪನೆಯಾಗಿರುವ ರಾಜ್ಯದಲ್ಲಿಯೇ ಪ್ರಪ್ರಥಮ ಅನಿಲ ಆಧಾರಿತ 370 ಮೆಗಾ ವಾಟ್ ಸಾಮರ್ಥ್ಯದ ’ಯಲಹಂಕ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ’ (ಸಿಸಿಪಿಪಿ) ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 260 ಕೋಟಿ ರೂ. ವೆಚ್ಚದಲ್ಲಿ ಬಿಡದಿಯಲ್ಲಿ ಸ್ಥಾಪಿಸಲಾಗುತ್ತಿರುವ ತ್ಯಾಜ್ಯದಿಂದ ತ್ಯಾಜ್ಯದಿಂದ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕವು ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net