

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಕೋಳಿ ಸಾಕಿದರೂ ಕೈತುಂಬ ಕಾಸು....
ಕೃಷಿ ಜತೆಗೆ ಪರ್ಯಾಯ ಆದಾಯ ಬಯಸುವ ರೈತರಿಗೆ ಕೋಳಿ, ಕುರಿ, ಮೇಕೆ ಸಾಕಣೆ ಅತ್ಯುತ್ತಮ ಮಾರ್ಗ. ಕೋಳಿಯಲ್ಲಿ ಮಾಂಸದ ಕೋಳಿ, ಮೊಟ್ಟೆ ಕೋಳಿ ಮತ್ತು ಮಿಶ್ರ ತಳಿಯ ಕೋಳಿಗಳಿವೆ. ಉಳಿದೆರಡಕ್ಕಿಂತ ಮಿಶ್ರ ತಳಿಯ ಕೋಳಿಗಳ ಸಾಕಣೆ ಸುಲಭ ಮತ್ತು ಹೆಚ್ಚು ಲಾಭದಾಯಕ. ಮೊಟ್ಟೆ ಕೋಳಿ ಮತ್ತು ಮಾಂಸದ ಕೋಳಿಗಳ ಜೀವಿತಾವಧಿ ಕಡಿಮೆ ಮತ್ತು ಅವುಗಳ ಸಾಕಣೆಗೆ ಹೆಚ್ಚಿನ ವೆಚ್ಚ, ನಿಗಾ ಅಗತ್ಯ. ಆದರೆ, ಗಿರಿರಾಜದಂತಹ ಮಿಶ್ರತಳಿ ಕೋಳಿಗಳು ನಾಟಿ ಕೋಳಿ ಮಾದರಿಯ ಆಹಾರ ಪದ್ಧತಿಯನ್ನು ಹೊಂದಿವೆ. ಒಂದು ಕೋಳಿ 75 ವಾರಗಳವರೆಗೆ 350 ಮೊಟ್ಟೆಗಳನ್ನು ನೀಡುತ್ತದೆ. ಅದಾದ ನಂತರ ಅದನ್ನು ಮಾಂಸದ ಕೋಳಿಯ ರೂಪದಲ್ಲಿ ಮಾರಾಟ ಮಾಡಬಹುದು. ಪರಿಶಿಷ್ಟ ಪಂಗಡದವರಿಗೆ ಕೋಳಿ ಸಾಕಣೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಡಿಎ 380 ಜಾತಿಯ ನಾಟಿ ಕೋಳಿ ಮಾದರಿಯ 100 ಕೋಳಿ ಮರಿಗಳನ್ನು ಕೊಡುತ್ತದೆ. ಅವುಗಳಿಗೆ ಆಹಾರ, ಸಾಕಲು ಕೇಜ್ ನೀಡುತ್ತದೆ. ಫಲಾನುಭವಿಗಳು ಜಾಗ ಹೊಂದಿದ್ದರೆ ಸಾಕು. ಡಿಎ 380 ಕೋಳಿ ಕಂದು ಬಣ್ಣದ ಮೊಟ್ಟೆಗಳನ್ನು ನೀಡುತ್ತದೆ. ಅದು ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಲು ಸಹಕಾರಿ. ಕೆಲವೆಡೆ ಈ ಕೋಳಿಯ ಮೊಟ್ಟೆಗಳನ್ನು ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಶಾಪಿಂಗ್ ಮಾಲ್ಗಳಲ್ಲಿ ಈ ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಒಂದು ಮೊಟ್ಟೆಗೆ ಖರ್ಚಾಗುವುದು 3 ರೂ.ಗಳಾದರೆ, ಅದನ್ನು 11 ರೂ.ವರೆಗೂ ಮಾಲ್ಗಳಲ್ಲಿ ಮಾರಬಹುದು! ಹಾಗೆಯೇ, ಕುರಿ ಮತ್ತು ಮೇಕೆಗಳ ಪೈಕಿ ಮೇಕೆ ಸಾಕಣೆ ಸುಲಭ. ಮೀನು ಮಾರುಕಟ್ಟೆಯೂ ಉತ್ತಮವಾಗಿದೆ. ಆದರೆ, ನೀರಿನ ನೈಸರ್ಗಿಕ ಮೂಲಗಳು ಕಡಿಮೆ ಇರುವೆಡೆ ಮೀನುಸಾಕಣೆ ಕಷ್ಟ.
| ಡಾ. ಕೆ. ವೆಂಕಟರೆಡ್ಡಿ ಆಡಳಿತ ಮಂಡಳಿ ಸದಸ್ಯ, ಪಶುವೈದ್ಯಕೀಯ ವಿಶ್ವವಿದ್ಯಾಲಯ, ಬೀದರ್