

ಪಾಟ್ನಾ: ಬಿಹಾರದಲ್ಲಿ ರಾಜಕೀಯ ವಾತಾವರಣ ಬಿಸಿಯಾಗಿದೆ. ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಆರ್‌ಜೆಡಿ ಗಂಭೀರ ಆರೋಪಗಳನ್ನು ಮಾಡಿದೆ. ಪಾಟ್ನಾದಲ್ಲಿರುವ ರಾಬ್ರಿ ದೇವಿ ಅವರ ಮನೆಯ ಹೊರಗೆ ಒಂದು ಪೋಸ್ಟರ್ ಅನ್ನು ಹಾಕಲಾಗಿದೆ. ಈ ಪೋಸ್ಟರ್‌ನಲ್ಲಿ ನಿತೀಶ್ ಕುಮಾರ್ ಸರ್ಕಾರವನ್ನು ತೀವ್ರವಾಗಿ ಟೀಕಿಸಲಾಗಿದೆ.
ಪೋಸ್ಟರ್‌ನಲ್ಲಿ ನಾನು ನಾಯಕನಲ್ಲ, ಖಳನಾಯಕ ಎಂದು ಬರೆಯಲಾಗಿದೆ. ಇದರಲ್ಲಿ ನಿತೀಶ್ ಕುಮಾರ್ ಮಹಿಳೆಯರನ್ನು ಅವಮಾನಿಸಿದ್ದಾರೆ ಮತ್ತು ಮಹಾತ್ಮ ಗಾಂಧಿ ಮತ್ತು ರಾಷ್ಟ್ರಗೀತೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ನುಡಿಸುವಾಗ ನಿತೀಶ್ ಕುಮಾರ್ ಮಾತನಾಡುತ್ತಾ ಸನ್ನೆ ಮಾಡುತ್ತಿದ್ದಾರೆಂದು ಹೇಳಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಗೌರವಾನ್ವಿತ ಮುಖ್ಯಮಂತ್ರಿಗಳೇ ದಯವಿಟ್ಟು ರಾಷ್ಟ್ರಗೀತೆಯನ್ನು ಅವಮಾನಿಸಬೇಡಿ. ನೀವು ಪ್ರತಿದಿನ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರನ್ನು ಅವಮಾನಿಸುತ್ತೀರಿ. ಕೆಲವೊಮ್ಮೆ ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ಚಪ್ಪಾಳೆ ತಟ್ಟುತ್ತಾರೆ ಮತ್ತು ಕೆಲವೊಮ್ಮೆ ಅವರು ರಾಷ್ಟ್ರಗೀತೆಯ ಮೇಲೆ ಚಪ್ಪಾಳೆ ತಟ್ಟುತ್ತಾರೆ! ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ನೀವು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ನಾನು ನಿಮಗೆ ನೆನಪಿಸುತ್ತೇನೆ. ನೀವು ಕೆಲವು ಸೆಕೆಂಡುಗಳು ಸಹ ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಥಿರವಾಗಿಲ್ಲ ಮತ್ತು ನೀವು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ರಾಜ್ಯಕ್ಕೆ ಬಹಳ ಕಳವಳಕಾರಿ ವಿಷಯವಾಗಿದೆ. ಬಿಹಾರವನ್ನು ಪದೇ ಪದೇ ಈ ರೀತಿ ಅವಮಾನಿಸಬೇಡಿ ಎಂದು ಟೀಕಿಸಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕಿ ರಾಬ್ರಿ ದೇವಿ ಕೂಡ ರಾಷ್ಟ್ರಗೀತೆಯ ಸಮಯದಲ್ಲಿ ನಿತೀಶ್ ಕುಮಾರ್ ಮಾತನಾಡಿದನ್ನು ಟೀಕಿಸಿದರು ಮತ್ತು ರಾಜ್ಯದ ಉಭಯ ಸದನಗಳಲ್ಲಿ ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.(ಏಜೆನ್ಸೀಸ್)