ಮುಂಬೈ: ನಾಗ್ಪುರ ಹಿಂಸಾಚಾರದ(Nagpur violence) ಸಮಯದಲ್ಲಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಯ ವೆಚ್ಚವನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ(ಮಾರ್ಚ್ 22) ಹೇಳಿದ್ದಾರೆ.
ಇದನ್ನು ಓದಿ: Delimitation | ಚೆನ್ನೈನಲ್ಲಿ ವಿರೋಧ ಪಕ್ಷದ ಮುಖ್ಯಮಂತ್ರಿಗಳ ಸಭೆ; ಕಾನೂನು ಹೋರಾಟ ನಡೆಸುವುದಾಗಿ ಸಿಎಂ ಸ್ಟಾಲಿನ್ ಸ್ಪಷ್ಟನೆ
ಯಾವುದೇ ಹಾನಿ ಸಂಭವಿಸಿದ್ದರೂ ಅದನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುತ್ತದೆ. ಅವರು ಹಣವನ್ನು ಪಾವತಿಸದಿದ್ದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅವರ ಆಸ್ತಿಯನ್ನು ಮಾರಾಟ ಮಾಡಿ ಪರಿಹಾರ ಪಡೆಯಲಾಗುತ್ತದೆ. ಅಗತ್ಯವಿದ್ದರೆ ಬುಲ್ಡೋಜರ್ ಬಳಸಿ ನೆಲಸಮಗೊಳಿಸುವ ಕ್ರಮವನ್ನೂ ಕೈಗೊಳ್ಳಲಾಗುವುದು.
ಛತ್ರಪತಿ ಸಂಭಾಜಿನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಡೆಸಿದ ಪ್ರತಿಭಟನೆಯ ಸಮಯದಲ್ಲಿ ಪವಿತ್ರ ಶಾಸನಗಳನ್ನು ಹೊಂದಿರುವ ಚಾದರ್ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಯಿಂದ ಮಾರ್ಚ್ 17ರಂದು ನಾಗ್ಪುರದಲ್ಲಿ ಘರ್ಷಣೆಗಳು ಭುಗಿಲೆದ್ದವು.
ಘರ್ಷಣೆಯಲ್ಲಿ ಮೂವರು ಪೊಲೀಸ್ ಉಪಆಯುಕ್ತರು (ಡಿಸಿಪಿ) ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಹಲವಾರು ವಾಹನಗಳು ಮತ್ತು ಮನೆಗಳಿಗೆ ಹಾನಿಯಾಗಿದೆ. ಶನಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ 104 ಜನರನ್ನು ಬಂಧಿಸಲಾಗಿದ್ದು ಇನ್ನೂ ಹೆಚ್ಚು ಜನರನ್ನು ಬಂಧಿಸಲಾಗುವುದು ಎಂದು ಫಡ್ನವೀಸ್ ಹೇಳಿದ್ದಾರೆ.
Nagpur | On Nagpur violence, Maharashtra CM Devendra Fadnavis says, “Whatever damage has happened will be recovered from the rioters. If they do not pay the money, then their property will be sold for the recovery. Wherever required, bulldozers will also be used…” pic.twitter.com/AhVS6Mp8Kx
— ANI (@ANI) March 22, 2025
ಗಲಭೆಯಲ್ಲಿ ಭಾಗಿಯಾಗಿರುವ ಅಥವಾ ಗಲಭೆಕೋರರಿಗೆ ಸಹಾಯ ಮಾಡುತ್ತಿರುವವರ ವಿರುದ್ಧ ಪೊಲೀಸ್ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಫಡ್ನವೀಸ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವವರನ್ನು ಸಹ ಆರೋಪಿಗಳನ್ನಾಗಿ ಮಾಡಲಾಗುವುದು. ಇಲ್ಲಿಯವರೆಗೆ 68 ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಗುರುತಿಸಿ ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಗಲಭೆಯ ಸಮಯದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವರದಿಗಳು ನಿಜವಲ್ಲ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳ ಮೇಲೆ ಕಲ್ಲು ಎಸೆಯಲಾಗಿದೆ, ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವರದಿಗಳು ನಿಜವಲ್ಲ ಎಂದು ಫಡ್ನವೀಸ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.(ಏಜೆನ್ಸೀಸ್)