

ನವದೆಹಲಿ: ಕೋವಿಡ್-19 ಸೋಂಕು ಹರಡದಂತೆ ತಡೆಯಲು ದೈಹಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಕೆಲವು ವೃತ್ತಿಗಳವರು ಈ ಅಂತರವನ್ನು ಕಾಪಾಡಿಕೊಳ್ಳಲು ತಮ್ಮದೇ ಆದ ವಿಶಿಷ್ಟ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.
ಹಾಲು ಮಾರುವವರೊಬ್ಬರು ತಮ್ಮ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಪೈಪ್ ಅಳವಡಿಸುವ ಮೂಲಕ ಗ್ರಾಹಕರಿಗೆ ದೂರದಿಂದಲೇ ಹಾಲನ್ನು ವಿತರಿಸುತ್ತಿದ್ದಾರೆ. ಹಾಲಿನವರು ಕೊಳವೆಯ ಒಂದು ಕಡೆಯಿಂದ ಹಾಲು ಸುರಿದರೆ ಗ್ರಾಹಕರು ಮತ್ತೊಂದು ಬದಿಯಲ್ಲಿ ನಿಂತು ಪಾತ್ರೆಯಲ್ಲಿ ಹಾಲನ್ನು ಸಂಗ್ರಹಿಸಿಕೊಳ್ಳುತ್ತಾರೆ.
ಅಲ್ಲದೆ ಹಾಲು ಮಾರಾಟಗಾರ ಮಾಸ್ಕ್ ಮತ್ತು ಗ್ಲೌಸ್ ಧರಿಸಿರುವುದು ಕೂಡ ಆ ಚಿತ್ರದಲ್ಲಿ ಕಂಡುಬರುತ್ತದೆ. ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೊಂದು ಮಾದರಿ ಪ್ರಯತ್ನ ಎಂಬ ಶ್ಲಾಘನೆ ಕೇಳಿಬರುತ್ತಿದೆ.