ಕನ್ನಡ ಸಮಸ್ಯೆಗಳಿಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ; ಡಾ.ಪುರುಷೋತ್ತಮ ಬಿಳಿಮಲೆ ವಿಶ್ವಾಸ|Positive response from Union Minister to Kannada issues

pur
Published on

ನವದೆಹಲಿ: ಕನ್ನಡದ ಜ್ವಲಂತ ಸಮಸ್ಯೆಗಳ ಪರಿಹಾರ ಕುರಿತಂತೆ ಕೇಂದ್ರ ಸಚಿವರಿಂದ ಪ್ರಾಮಾಣಿಕ ಪ್ರಯತ್ನದ ಭರವಸೆ ದೊರೆತಿದೆ(Positive response from Union Minister to Kannada issues) ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ನೇತೃತ್ವದ ನಿಯೋಗ ಕನ್ನಡ ಸಮಸ್ಯೆಗಳ ಕುರಿತು ಕೇಂದ್ರದ ಸಚಿವರ ಜತೆ ಸಮಾಲೋಚನೆ ನಡೆಸಿದೆ. ಅನೇಕ ಸಮಸ್ಯೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಸಂಸತ್ ಭವನದಲ್ಲಿ ಸಭೆಯನ್ನು ನಡೆಸಲಾಗಿದ್ದು, ಮೈಸೂರಿನಲ್ಲಿರುವ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯ (ಸಿಐಐಎಲ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸುವುದು, ಈ ಕೇಂದ್ರಕ್ಕೆ ಅನುದಾನ, ಆಡಳಿತ ವ್ಯವಸ್ಥೆ ಮೇಲ್ದರ್ಜೆಗೆರಿಸಲು ಅನುಕೂಲ ಮಾಡಿಕೊಡುವ ಭರವಸೆ ಸಿಕ್ಕಿದೆ ಎಂದರು.

ಕೇಂದ್ರ ಪಠ್ಯಕ್ರಮ ಶಾಲೆಗಳಿಗೆ ನಿರ್ದೇಶನ

ಕನ್ನಡ ಭಾಷಾ ಕಲಿಕಾ ಅಧಿನಿಯಮದ ಅನುಸಾರ ಕನ್ನಡವನ್ನು ಕಡ್ಡಾಯವಾಗಿ ಕಲಿಸಲು ರಾಜ್ಯದ ಎಲ್ಲ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ನಿರ್ದೇಶನ ನೀಡಲು ಅಗತ್ಯ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಸ್ಮಾರಕ ಸಂರಕ್ಷಣೆಗೆ ವಿಶೇಷ ಒತ್ತು

ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯದಲ್ಲಿನ ಸ್ಮಾರಕಗಳ ಸಂರಕ್ಷಣೆಗೆ ವಿಶೇಷ ಗಮನ ಹರಿಸುವ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಸಾಂಸ್ಕೃತಿಕ ಸಮಿತಿಗಳನ್ನು ರಚಿಸುವ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಪ್ರತಿಭಾನ್ವಿತ ಕಲಾವಿದರು, ಸಂಗೀತಗಾರರಿಗೆ ಅದ್ಯತೆಯ ಅವಕಾಶ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ ಎಂದರು.

ನ್ಯೂನತೆ ಸರಿಪಡಿಸುವ ಭರವಸೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬ್ಯಾಂಕ್ ನೇಮಕಾತಿ ನ್ಯೂನತೆಗಳ ಕಾರಣ ಸ್ಥಳೀಯರಿಗೆ ಅವಕಾಶ ದೊರಕುತ್ತಿಲ್ಲವೆಂಬ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತರಾಮನ್ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದರು.

ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿರುವ ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಯುಜಿಸಿ ಅನುದಾನ ಪುನಃ ಆರಂಭಿಸುವ ಕುರಿತು ಸಂಬಂಧಪಟ್ಟ ಸಚಿವಾಲಯದ ಜತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದೂ ತಿಳಿಸಿದರು.

ರಸ್ತೆ, ನಿಲ್ದಾಣಗಳಿಗೆ ಮೇರು ವ್ಯಕ್ತಿಗಳ ಹೆಸರು

ನವದೆಹಲಿಯಲ್ಲಿ ಇರುವ ಆಯ್ದ ರಸ್ತೆ-ನಿಲ್ದಾಣಗಳಿಗೆ ಕನ್ನಡದ ಮೇರು ವ್ಯಕ್ತಿಗಳ ಹೆಸರನ್ನು ಇಡಬೇಕೆಂದು ಪ್ರಾಧಿಕಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಪುರುಷೋತ್ತಮ ಬಿಳಿಮಲೆ ವಿವರಿಸಿದರು.

ಜೆಎನ್‌ಯುಗೆ ನಿಯೋಗ ಭೇಟಿ

ನಿಯೋಗವು ಜೆಎನ್‌ಯುಗೆ ಭೇಟಿ ನೀಡಿ, ಅಲ್ಲಿನ ಡೀನ್ ಹಾಗೂ ಡೈರೆಕ್ಟರ್ ಜತೆ ಸುದೀರ್ಘವಾಗಿ ಚರ್ಚಿಸಿತು. ಕನ್ನಡ ಪೀಠಕ್ಕೆ ಪ್ರಾಧ್ಯಾಪಕರನ್ನು ನೇಮಿಸಲು ಅಗುತ್ತಿರುವ ವಿಳಂಬಕ್ಕೆ ಕಾರಣಗಳನ್ನು ಚರ್ಚಿಸಿತು.

ನಿಯೋಗದಲ್ಲಿ ಯಾರು ಯಾರು?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಂಸದ ಎಲ್. ಹನುಮಂತಯ್ಯ, ಶಿಕ್ಷಣತಜ್ಞ ಹಿ.ಚಿ. ಬೋರಲಿಂಗಯ್ಯ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ವಿದ್ಯಾವರ್ಧಕ ಸಂಘ ಧಾರವಾಡದ ಶಂಕರ ಹಲಗತ್ತಿ, ಪ್ರಾಧಿಕಾರದ ಸದಸ್ಯರಾದ ವಿ.ಪಿ. ನಿರಂಜನಾರಾಧ್ಯ, ಎ.ಬಿ.ರಾಮಚಂದ್ರಪ್ಪ, ದಾಕ್ಷಾಯಿಣಿ ಹುಡೇದ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಅಧ್ಯಕ್ಷರ ಆಪ್ತಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ಇದ್ದರು.

ನಿಯೋಗದಿಂದ ಯಾರ ಭೇಟಿ 

ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಧರ್ಮೇಂದ್ರ ಪ್ರಧಾನ್, ಗಜೇಂದ್ರ ಸಿಂಗ್ ಶೇಖಾವತ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಯೋಗ ಭೇಟಿ ಮಾಡಿದೆ.

ಕರ್ನಾಟಕ ಸಂಸದರ ಸಭೆ:

ಕನ್ನಡ ಸಮಸ್ಯೆಗಳ ಕುರಿತು ನಿಯೋಗ ಸಂಸದರ ಸಭೆ ನಡೆಸಿತು. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದರಾದ ಕುಮಾರ ನಾಯ್ಕ, ಇ. ತುಕಾರಂ, ಈರಣ್ಣ ಕಡಾರಿ, ಡಾ. ಸಿ.ಎನ್. ಮಂಜುನಾಥ್ ಇದ್ದರು. ಸಂಸದರಾದ ಸುಧಾಮೂರ್ತಿ, ಡಾ. ಕೆ.ಸುಧಾಕರ್ ಅವರನ್ನೂ ನಿಯೋಗ ಭೇಟಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net